ರಿಕ್ಕಿ ರೈ ಶೂಟೌಟ್ ಪ್ರಕರಣ: ಅನುರಾಧಗೆ ಹೈಕೋರ್ಟ್ ರಿಲೀಫ್!

ಬೆಂಗಳೂರು:

    ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ರಾಮನಗರ ತಾಲ್ಲೂಕಿನ ಬಿಡದಿ ಬಳಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಮಂಗಳವಾರ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಅವರಿಗೆ ರಿಲೀಫ್ ನೀಡಿದೆ.ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠವು, ಅನುರಾಧ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

    ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಅನುರಾಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.ಏಪ್ರಿಲ್ 18 ಮತ್ತು 19ರ ಮಧ್ಯರಾತ್ರಿ ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿರುವ ರಿಕ್ಕಿ ರೈ ಅವರ ಫಾರ್ಮ್‌ಹೌಸ್‌ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆಯಲ್ಲಿ ಅನುರಾಧ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.

    ರಿಕ್ಕಿ ಅವರ ಕಾರು ಚಾಲಕ ಬಸವರಾಜ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಬಿಡದಿ ಪೊಲೀಸರು ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅನುರಾಧ ಪರ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ಆರಂಬಟ್ಟಿ, ಪ್ರಕರಣದಲ್ಲಿ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದರು.

   ಅನುರಾಧಾ ಮತ್ತು ರಿಕ್ಕಿ ರೈ ನಡುವಿನ ಎಲ್ಲ ವಿವಾದಗಳು ಆರು ತಿಂಗಳ ಹಿಂದೆಯೇ ಬಗೆಹರಿದಿವೆ. ಅನುರಾಧಾ ಏಪ್ರಿಲ್ 14 ರಂದು ತನ್ನ ಮಗಳೊಂದಿಗೆ ಯುರೋಪ್‌ಗೆ ಪ್ರಯಾಣ ಬೆಳೆಸಿದ್ದಾರೆ ಮತ್ತು ಕೊಲೆ ಯತ್ನಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.ಈ ಸಲ್ಲಿಕೆಗಳನ್ನು ಪರಿಗಣಿಸಿದ ಹೈಕೋರ್ಟ್ ಅನುರಾಧಾ ಅವರಿಗೆ ಮಧ್ಯಂತರ ಪರಿಹಾರ ನೀಡಿತು.