ಆಧುನಿಕತೆ ಹೆಚ್ಚಿದಂತೆ ಕ್ಷೀಣಿಸುತ್ತಿದೆ ಭಾಷಾ ಸ್ವಂತಿಕೆ ..!

      ಕನ್ನಡ ಭಾಷೆ ತನ್ನ ಸಾಂಪ್ರದಾಯಿಕತ್ವ ಕಳೆದುಕೊಳ್ಳುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚು ಆವರಿಸಿದಂತೆ ಭಾಷಾ ಪ್ರಯೋಗದ ಸ್ವಂತಿಕೆ ಕ್ಷೀಣಿಸುತ್ತಿದೆ. ಭಾವನೆಗಳನ್ನು ಹೊರ ಹಾಕಲು ಪ್ರಮುಖ ಸಾಧನವಾಗಿರುವ ಭಾಷೆಯ ಅನ್ವೇಷಣೆಯ ಬಗ್ಗೆ ಗಮನ ಹರಿಸುತ್ತಿಲ್ಲ.
      ಕನ್ನಡವೂ ಸೇರಿಕೊಂಡಂತೆ ದೇಶದ ಉದ್ದಗಲಕ್ಕೂ ಈ ಅನ್ವೇಷಣೆಯ ಕೊರತೆ ಎದ್ದು ಕಾಣುತ್ತಿದೆ. ತನ್ನ ಸಾಂಪ್ರದಾಯಿ ಕತ್ವ ಶೈಲಿಯಿಂದಲೆ ಕೆಲವು ಪದಗಳು ಪರಿಚಯವಾಗಬೇಕು. ಈ ಪದಗಳ ಬಳಕೆ ಭಾಷಾ ಪ್ರೇಮ ಮತ್ತು ಭಾಷಾ ಸಂಸ್ಕøತಿಯನ್ನು ಹೆಚ್ಚಿಸುವುದಲ್ಲದೆ, ಸುಲಭದ ಅರ್ಥ ಗ್ರಹಿಕೆಗೂ ಸಾಧ್ಯವಾಗುತ್ತದೆ. ಅಂತಹ ಪದ ಬಳಕೆ ಪ್ರಯೋಗಗಳೆ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಭಾಷಾ ಸಾಂಪ್ರದಾಯಿಕತ್ವ ಮುಂದುವರಿಕೆ ಹೇಗೆ ಸಾಧ್ಯ? 
     ಮುಂದುವರಿದ ರಾಷ್ಟ್ರಗಳಲ್ಲಿ ಭಾಷಾ ಅನ್ವೇಷಣೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಆರ್ಕಿಮಿಡೀಸ್  ಬಳಸಿದ `ಯುರೇಕ’ ಪದವನ್ನೇ ಉದಾಹರಣೆಯನ್ನಾಗಿ ನೋಡಿದರೆ ಅದರೊಳಗಿರುವ  ಅರ್ಥ, ಸುಲಭವಾಗಿ ಅರ್ಥವಾಗುವ ವಿಧಾನ ಮತ್ತು ಭಾಷೆ ಹೇಗೆ ಸಮ್ಮಿಳಿತವಾಗಿದೆ ಎಂಬುದನ್ನು ಗ್ರಹಿಸಬಹುದು. ಯಾವುದೇ ಭಾಷೆ ಅನ್ವೇಷಣೆಗೆ ಒಳಗಾಗದೆ ಹೋದರೆ ಅಪ್ರಸ್ತುತವಾಗುವ ಸಾಧ್ಯತೆಗಳೆ ಹೆಚ್ಚು. ಲ್ಯಾಟಿನ್, ಸಂಸ್ಕøತ ಇತ್ಯಾದಿ ಭಾಷೆಗಳು ಹೇಗೆ ಅಪ್ರಸ್ತುತವಾಗುತ್ತಿವೆ ಎಂಬುದಿಲ್ಲಿ ಗಮನಾರ್ಹ. 
     ಕನ್ನಡವಿಂದು ಒಂದು ಭಾಷೆಯಾಗಿ ಉಳಿಯುತ್ತಿರುವುದು ಇತರೆ ಭಾಷೆಗಳ ಅರಿವಿಲ್ಲದ ಗ್ರಾಮೀಣ ಸಮುದಾಯದಿಂದ ಎಂಬುದು ಸ್ಪಷ್ಟ. ಅಪ್ಪಟ ಪದ ಪ್ರಯೋಗ, ಭಾಷಾ ಸಂಸ್ಕೃತಿ ಉಳಿದಿರುವುದು ಅವರಿಂದಲೆ. ಅದೇ ಗ್ರಾಮಗಳಿಂದ ನಗರಕ್ಕೆ ಬಂದು ಸುಸಂಸ್ಕೃತರಾದ ನಾಗರಿಕರು ನೀಡಿದ ಕೊಡುಗೆ ಏನೆಂಬುದನ್ನು ವಿವರಿಸಿ ಹೇಳಬೇಕಿಲ್ಲ. ತಮ್ಮ ಮಕ್ಕಳನ್ನು ಇಂತಹದ್ದೆ ಶಾಲೆಗೆ ಸೇರ್ಪಡೆ ಮಾಡಬೇಕು ಎಂಬ ಆಲೋಚನೆ-ಹಠಗಳಿಂದ ಹಿಡಿದು ಅನ್ಯ ಭಾಷೆಗಳ ವ್ಯಾಮೋಹದ ತನಕ ಅವರ ಆಸಕ್ತಿ ಹೊರಳುತ್ತಿದೆ. ಕನ್ನಡ ಸಭೆ, ಸಮಾರಂಭಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿಲ್ಲ. ತಾನು ಹುಟ್ಟಿ ಬೆಳೆದ ಗ್ರಾಮಗಳಿಗೆ ಮಕ್ಕಳನ್ನು ಹೋಗಲು ಬಿಡುತ್ತಿಲ್ಲ. ಅಲ್ಲಿನ ಸಂಸ್ಕೃತಿ ಸದಾಚಾರಗಳ ಪರಿಚಯ ಮಾಡಿಸುತ್ತಿಲ್ಲ. ಪಾಶ್ಚಿಮಾತ್ಯ ಸಂಸ್ಕøತಿಯನ್ನು ಸಾದರಪಡಿಸುವ ಕಾರ್ಯಕ್ರಮಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು, ಮಕ್ಕಳಿಗೂ ಇದೇ ಪ್ರೇರಣೆ ನೀಡುತ್ತಿದ್ದರೆ ಭಾಷಾ ಸಂಸ್ಕøತಿ ಉಳಿಯುವುದು ಹೇಗೆ? 
      ಕುಟುಂಬಗಳಲ್ಲಿ ಕನ್ನಡ ಭಾಷೆ, ತಂದೆ-ತಾಯಿ, ಅಜ್ಜ-ಅಜ್ಜಿಯ ಭಾಷೆಯಾಗುತ್ತಿದ್ದು, ಮಕ್ಕಳು, ಮೊಮ್ಮಕ್ಕಳು ಆಂಗ್ಲ ಭಾಷೆಯ ಅನಿವಾರ್ಯ ಪರಿಸ್ಥಿತಿಗೆ ಸಿಲುಕುತ್ತಿದ್ದಾರೆ. ತನ್ನಪ್ಪ ಹುಟ್ಟಿದೂರಿಗೆ ಹೋದ ಮಗು ಅಲ್ಲಿ ಬೆಳೆಯುವ, ಕಾಣಿಸುವ ಪ್ರತಿಯೊಂದನ್ನೂ ಆಧುನಿಕ ಹೆಸರಿನೊಂದಿಗೆ ವಿವರಿಸಿ ಹೇಳಬೇಕಿರುವ ಕಾಲಘಟ್ಟದಲ್ಲಿ ಬದುಕುತ್ತಿದ್ದಾರೆ. ಹಳ್ಳಿಯಲ್ಲಿ ಬೆಳೆಯುವ ದವಸ ಧಾನ್ಯಗಳ ಹೆಸರೆ ಈಗಿನ ಮಕ್ಕಳಿಗೆ ತಿಳಿಯುತ್ತಿಲ್ಲ. ಅಲ್ಲಿನ ಬದುಕು, ಜನರ ಸಂಸ್ಕೃತಿ ಅರ್ಥವಾಗುತ್ತಿಲ್ಲ. ಪೋಷಕರು ಈ ಬಗ್ಗೆ ಯೋಚಿಸಬೇಕಲ್ಲವೆ? 
       ಕನ್ನಡವನ್ನು ಐಚ್ಛಿಕವಾಗಿ ಓದುವವರೂ ಸ್ವತಂತ್ರವಾಗಿ ಅಭಿವ್ಯಕ್ತಿಸುವ ಸಾಮಥ್ರ್ಯ ಕಳೆದುಕೊಳ್ಳುತ್ತಿದ್ದಾರೆ. ಇವರೆಲ್ಲ ಪಠ್ಯಕ್ರಮದ ಅಭ್ಯಾಸಕ್ಕಷ್ಟೆ ಸೀಮಿತಗೊಳ್ಳುತ್ತಿದ್ದಾರೆ. ಭಾಷೆಯ ಆಳ ಅಧ್ಯಯನದ ಅರಿವು ಇವರಲ್ಲಿ ಕಾಣಿಸುತ್ತಿಲ್ಲ. ಹಳ್ಳಿಯನ್ನು ತೊರೆದು ಬಂದವರು, ಕನ್ನಡವನ್ನು ಐಚ್ಛಿಕವಾಗಿ ಓದುತ್ತಿರುವವರು ಇವರ್ಯಾರಲ್ಲೂ ಹಳ್ಳಿಯ ಭಾಷೆಗಳನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಆಧುನೀಕರಣಕ್ಕೆ, ನಗರೀಕರಣಕ್ಕೆ ಹೊಂದಿಕೊಳ್ಳುವ ಭರಾಟೆಯಲ್ಲಿ ಹಳ್ಳಿಯ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದು ಭಾಷಾ ಬೆಳವಣಿಗೆಗೆ ಒಂದು ಕಂಟಕವಲ್ಲವೆ? 
       ಕನ್ನಡವನ್ನು ಐಚ್ಛಿಕ ಭಾಷೆಯಾಗಿ ಓದುತ್ತಿರುವವರಿಗೂ ಸರಿಯಾದ ಭಾಷಾ ಬಳಕೆ ಇಲ್ಲ. ಅದೆಷ್ಟೋ ಮಂದಿಗೆ ಕನ್ನಡದ ಕವಿಗಳು, ಹೋರಾಟಗಾರರು, ಸಾಹಿತಿಗಳ ಹೆಸರೆ ತಿಳಿದಿಲ್ಲ. ಕುವೆಂಪು ಅವರ ಶ್ರೀರಾಮಾಯಣ ದರ್ಶನಂ, ದ.ರಾ. ಬೇಂದ್ರೆಯವರ ನಾಕು ತಂತಿ, ಡಿವಿಜಿಯವರ ಮಂಕುತಿಮ್ಮನ ಕಗ್ಗ ಇತ್ಯಾದಿಗಳನ್ನು ಅದೆಷ್ಟು ಜನ ನಿರರ್ಗಳವಾಗಿ ಓದಬಲ್ಲರು? ಅ.ನ.ಕೃಷ್ಣರಾಯರು, ಆಲೂರು ವೆಂಕಟರಾಯರು, ಶಿವರಾಮ ಕಾರಂತ, ಕುವೆಂಪು, ಬೇಂದ್ರೆ, ಮಾಸ್ತಿ, ಅಡಿಗ, ಪು.ತಿ.ನ, ಬಿಎಂಶ್ರೀ, ತೀನಂಶ್ರೀ, ನಿಸಾರ್ ಅಹಮದ್ ಮೊದಲಾದವರ ಬಗ್ಗೆ ಅದೆಷ್ಟು ಜನ ತಿಳಿದುಕೊಂಡಿದ್ದಾರೆ. ಹಳಗನ್ನಡವನ್ನು ಓದುವ, ತಿಳಿದುಕೊಳ್ಳುವ ಬಗ್ಗೆ ಎಷ್ಟು ಜನರಲ್ಲಿ ಆಸಕ್ತಿ ಇದೆ?
      ಕನ್ನಡ ವ್ಯಾಕರಣ, ಅಕ್ಷರಗಳ ಬಗ್ಗೆ ಇರುವ ಜ್ಞಾನದ ಬಗ್ಗೆ ವಿವರಿಸಿ ಹೇಳಬೇಕಿಲ್ಲ. ಹಲವರಲ್ಲಿ ಈ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ತತ್ಸಮ- ತದ್ಭವ, ಸಂಧಿ -ಸಮಾಸ, ಸ್ವರ-ವ್ಯಂಜನ, ಅಲ್ಪ ಪ್ರಾಣ – ಮಹಾಪ್ರಾಣಗಳ ಉಚ್ಛಾರ, ಅವುಗಳ ಪದ ಬಳಕೆ ಜ್ಞಾನದ ಅರಿವು ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲ, ಅದೆಷ್ಟೊ ಮಂದಿ ಶಿಕ್ಷಕರಿಗೂ ಇಲ್ಲ. ಇಂತಹ ಪ್ರಸಂಗಗಳನ್ನು ಅಲ್ಲಲ್ಲಿ ನೋಡುತ್ತಲೆ ಬಂದಿದ್ದೇವೆ. ಓದುವ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲೆ ಈ ಸ್ಥಿತಿ ಕಾಣುವಂತಾಗಿರುವುದು ವಿಪರ್ಯಾಸ. 
      ತಮಿಳುನಾಡು, ಕೇರಳ ರಾಜ್ಯಗಳಲ್ಲಿರುವಂತಹ ಭಾಷಾ ಪ್ರಜ್ಞೆ ನಮ್ಮಲ್ಲಿ ಅಷ್ಟಾಗಿಲ್ಲ. ಅಲ್ಲಿನ ಜನ ನಮ್ಮವರೊಂದಿಗೆ ಅವರದ್ದೆ ಭಾಷೆಯಲ್ಲಿ, ಅದೇ ಧಾಟಿಯಲ್ಲಿ ಮಾತನಾಡುತ್ತಾರೆ. ನಮ್ಮ ರಾಜ್ಯಕ್ಕೆ ಬಂದಾಗಲೂ ಅವರ ಭಾಷೆಯಲ್ಲೆ ವ್ಯವಹರಿಸಲು ಪ್ರಯತ್ನಿಸುತ್ತಾರೆ. ನಮ್ಮವರು ಮಾತ್ರ ಅವರನ್ನು ತೃಪ್ತಿಪಡಿಸುವ ರೀತಿಯಲ್ಲಿ ಅವರದ್ದೆ ಭಾಷಾ ಬಳಕೆಗೆ ಮುಂದಾಗುತ್ತಾರೆ.
 
      ಅಧಿಕಾರಿಗಳೂ ಅಷ್ಟೆ. ನಮ್ಮ ರಾಜ್ಯದ ಅಧಿಕಾರಿಗಳು ಅಲ್ಲಿಗೆ ತೆರಳಿ ಕಡ್ಡಾಯವಾಗಿ ಆ ಭಾಷೆಯನ್ನು ಕಲಿತು ಬರುತ್ತಿದ್ದರೆ ಇಲ್ಲಿಗೆ ಬಂದ ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ವ್ಯವಹಾರಿಕವಾಗಿ  ಒಂದೆರಡಕ್ಷರಗಳನ್ನು ಕಲಿತು ಹೋಗುತ್ತಿದ್ದಾರೆ. ಇಲ್ಲಿ ಕನ್ನಡ ಕಡ್ಡಾಯ ಎಂಬುದು ಕ್ಲೀಷೆಗೆ ಒಳಗಾಗುತ್ತಿದೆ. ಕನ್ನಡ ಕಲಿಯದ ಅಧಿಕಾರಿಗಳು, ಕನ್ನಡ ಭಾಷೆ ಬಳಸದವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ.
     ಕನಿಷ್ಠ ಮಟ್ಟದ ದಂಡನಾರೂಪದ ಕ್ರಮಗಳೆ ಇಲ್ಲ ಎಂದಾದಲ್ಲಿ ಭಾಷಾ ಪ್ರಯೋಗ, ಅದರ ಉಳಿವು ಹೇಗೆ ಸಾಧ್ಯ? ಕರ್ನಾಟಕ ಎಲ್ಲ ಸಹಿಷ್ಣುತೆಗಳಿಗೆ ಹೆಸರುವಾಸಿ. ಅನೇಕರು ಎಲ್ಲೆಲ್ಲಿಂದಲೊ ವಲಸೆ ಬಂದು ಇಲ್ಲಿಯೆ ತಳವೂರಿದ್ದಾರೆ. ಕನ್ನಡ ಬಾರದಿದ್ದರೂ ಇಲ್ಲಿ ಬದುಕಬಹುದು ಎಂಬ ಧೋರಣೆ ಅವರಲ್ಲಿದೆ. ಈ ಧೋರಣೆ ಬದಲಾಗಬೇಕು. ಈಗಾಗಲೆ ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿರುವುದು ಒಂದು ಎಚ್ಚರಿಕೆಯ ಸಂದೇಶ.
    ಕರ್ನಾಟಕದಲ್ಲಿರುವ ಶಾಲೆಗಳನ್ನು ನಡೆಸುವವರಿಗೆ ಕನ್ನಡ ಬೇಕಾಗಿಲ್ಲ. ಕರ್ನಾಟಕ ಸರ್ಕಾರವು ಖಾಸಗಿ ಶಾಲೆಗಳಲ್ಲಿಯೂ ಕನ್ನಡ ಕಡ್ಡಾಯ ಕಲಿಕೆಯ ಸುತ್ತೋಲೆ ಹೊರಡಿಸಿದಾಗ 2017 ರಲ್ಲಿ ಖಾಸಗಿ ಶಾಲೆಗಳು ನ್ಯಾಯಾಂಗದ ಮೆಟ್ಟಿಲು ಹತ್ತಿದವು. ಸಿಬಿಎಸ್‍ಸಿ, ಸಿಬಿಎಸ್‍ಇ ಪಠ್ಯಕ್ರಮ ಕೇಂದ್ರ ಸರ್ಕಾರದ ಅಡಿಯಲ್ಲಿರುವುದರಿಂದ ನಾವು ರಾಜ್ಯ ಸರ್ಕಾರದ ನಿಯಮಾವಳಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ತಗಾದೆ ತೆಗೆದಿದ್ದ ವಿಷಯ ಆಗ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇಂದೂ ಸಹ ಹಲವು ಶಾಲೆಗಳಲ್ಲಿ ಕನ್ನಡ ಭಾಷಾ ಬಳಕೆಗೆ ನಿರ್ಬಂಧವಿದೆ.
 
    ಕರ್ನಾಟಕದ ನೆಲದ ಶಾಲೆಗಳಲ್ಲೆ ಈ ದುಸ್ಥಿತಿಯಾದರೆ ಹೇಗೆ? ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿ ಶಾಲೆಗಳನ್ನು ಮುಚ್ಚುತ್ತಿರುವುದು, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಿರುವುದು ಇವೆಲ್ಲವೂ ಇತ್ತೀಚಿನ ವರ್ಷಗಳಲ್ಲಿ ಪರ-ವಿರೋಧದ ಚರ್ಚೆಗೆ ಸೀಮಿತವಾಗುತ್ತಿವೆ.
     ಸಾಮಾಜಿಕ ಜಾಲತಾಣಗಳ ಮಾಧ್ಯಮ ಇಂದು ಹೆಚ್ಚು ಪ್ರಖರತೆ ಪಡೆದುಕೊಳ್ಳುತ್ತಿದೆ. ಈ ಮಾಧ್ಯಮಗಳಲ್ಲಿ ನಿರಂತರ ಭಾಷಾ ಕೊಲೆಯಾಗುತ್ತಿದೆ. ಇದು ಆತಂಕಕಾರಿ ವಿಷಯವಾದರೂ ಕನ್ನಡ ಭಾಷೆಯಲ್ಲಿಯೆ ಸಂವಹನದ ತಂತ್ರಾಂಶ ಬಳಕೆ ಮಾಡಿಕೊಳ್ಳುತ್ತಿರುವುದು, ಕನ್ನಡದಲ್ಲಿಯೆ ವಾಟ್ಸಪ್, ಫೇಸ್‍ಬುಕ್, ಟ್ವಿಟರ್ ಮುಂತಾದ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುತ್ತಿರುವುದು ಒಂದು ಸಮಾಧಾನ ತರುವ ಅಂಶ.  
     ಕನ್ನಡದಲ್ಲಿ ಬರೆಯುವವರ, ಪುಸ್ತಕ ಪ್ರಕಟಿಸುವವರ ಸಂಖ್ಯೆ ಕ್ಷೀಣಿಸಿಲ್ಲ. ಆದರೆ ಇವುಗಳನ್ನು ಕೊಂಡು ಓದುವ, ಬರಹಗಾರರನ್ನು ಪ್ರೋತ್ಸಾಹಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯ. ಪುಸ್ತಕ ಪ್ರಕಟಿಸುವವರು ಅವುಗಳನ್ನು ತಮ್ಮ ಮನೆಯ ಕಪಾಟಿನಲ್ಲಿಟ್ಟುಕೊಳ್ಳುತ್ತಿರುವುದು ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿರುವ ದ್ಯೋತಕ. ಸಾಮಾಜಿಕ ಜಾಲತಾಣಗಳ ಸಂಸ್ಕೃತಿ ಹೆಚ್ಚಾದಂತೆ ಪುಸ್ತಕ ಸಂಸ್ಕøತಿ ಕ್ಷೀಣಿಸುತ್ತಿದೆ. ಇದು ಭಾಷಾ ಬೆಳವಣಿಗೆ ಮತ್ತು ಭಾಷಾ ಸಂಸ್ಕøತಿಯ ಮೇಲಿನ ಬಹುದೊಡ್ಡ ಪೆಟ್ಟು. 
    ಕನ್ನಡ ನಾಡು ನುಡಿಯನ್ನು ಮತ್ತಷ್ಟು ಸಂಪದ್ಭರಿತಗೊಳಿಸಲು, ಇರುವ ಸಮಸ್ಯೆಗಳನ್ನು ನಿವಾರಿಸಲು ಗಂಭೀರ ಚರ್ಚೆಗಳು ಅಗತ್ಯ. 64ನೆ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಇಂತಹ ಚಿಂತನ-ಮಂಥನಗಳು ಹೆಚ್ಚು ನಡೆಯಲಿ. ಮಾತೃಭಾಷಾ ಬೆಳವಣಿಗೆಗೆ ಪ್ರೋತ್ಸಾಹದಾಯಕ ವಾತಾವರಣ ನಿರ್ಮಾಣವಾಗಲಿ ಎಂಬ ಆಶಯದೊಂದಿಗೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap