ಜೈಪುರ:
ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಗೆ ಇನ್ನೇನು ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದ್ದು, ಸದ್ಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಿಜೆಪಿ 370 ಸ್ಥಾನಗಳಲ್ಲಿ ಗೆಲ್ಲುವುದಿಲ್ಲ ಅಥವಾ ಎನ್‌ಡಿಎ 400 ಸ್ಥಾನಗಳನ್ನು ಪಡೆಯುವುದಿಲ್ಲ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಪ್ರಧಾನಿ ಹುದ್ದೆಯಿಂದ ತಮ್ಮ ಹೆಸರನ್ನು ಹಿಂಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಗೆಹ್ಲೋಟ್, ‘ಬಿಜೆಪಿಗೆ 370 ಸ್ಥಾನಗಳು ಅಥವಾ ಎನ್‌ಡಿಎಗೆ 400 ಸ್ಥಾನಗಳು ಬರುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಪ್ರಧಾನಿ ಮೋದಿ ಹೆಸರಿನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರು ಈಗ ಪ್ರಧಾನಿ ಹುದ್ದೆಯ ಉಮೇದುವಾರಿಕೆಯಿಂದ ತಮ್ಮ ಹೆಸರನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನಾಯಕತ್ವದಲ್ಲಿ ಬಿಜೆಪಿ 370ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಕಾಣಲಿದೆ ಮತ್ತು ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಂಸತ್ತಿನಲ್ಲಿ ಹೇಳಿಕೊಂಡಿದ್ದರು. 2024ರ ಲೋಕಸಭೆ ಚುನಾವಣೆ ಸಂಪೂರ್ಣವಾಗಿ ಮೋದಿ ತಮ್ಮ ಮೇಲೆ ಕೇಂದ್ರೀಕರೀಸಿಕೊಂಡಿದ್ದಾರೆ ಎಂದರು.
ಪ್ರಚಾರದಲ್ಲಿ ಬಿಜೆಪಿ ಎನ್ನುವ ಪದಕ್ಕಿಂತ ಮೋದಿ ಕಿ ಗ್ಯಾರಂಟಿ, ಮತ್ತೆ ಮೋದಿ ಸರ್ಕಾರ ಎಂಬ ಪದಪುಂಜಗಳೇ ಹೆಚ್ಚಾಗಿ ಕೇಳಿಬಂದವು. ಎಂಪಿ ಅಭ್ಯರ್ಥಿಗಳನ್ನು ಬೈಪಾಸ್ ಮಾಡಿ ಇಡೀ ಚುನಾವಣೆಯನ್ನು ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ನಡೆಸಲಾಗಿದೆ. ಹಣದುಬ್ಬರ, ನಿರುದ್ಯೋಗ, ಸಮಾಜದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಂತಹ ಸಮಸ್ಯೆಗಳು ಚುನಾವಣೆಯಲ್ಲಿ ಗೌಣವಾಗಿವೆ ಎಂದು ಅವರು ಹೇಳಿದರು.