ಕಲಬುರಗಿ :
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿರುವ ತಿಪ್ಪೆಗುಂಡಿಯಲ್ಲಿ ಒಂದು ನಾಡಪಿಸ್ತೂಲ್ ಹಾಗೂ ಮೂರು ಗುಂಡುಗಳು ಪತ್ತೆಯಾಗಿವೆ. ತಿಪ್ಪೆಗುಂಡಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಅದೇನು ಎಂದು ಪರಿಶೀಲಿಸಿದಾಗ ಇವು ಪತ್ತೆಯಾಗಿವೆ. ಬಹುಶಃ ತಿಪ್ಪೆಗುಂಡಿಗೆ ಹಾಕಿದ ಬೆಂಕಿಯಿಂದ ಒಂದು ಗುಂಡು ಆಸ್ಫೋಟಿಸಿರಬಹುದು ಎಂದು ಶಂಕಿಸಲಾಗಿದೆ.
ಟೈಲರ್ ಅಂಗಡಿಯ ಮಾಲೀಕರಾದ ಮಾಳಪ್ಪ ಅಂಬಣ್ಣ ಹೂಗೊಂಡ ಎಂಬವರು ದೈನಂದಿನಂತೆ ತಮ್ಮ ಅಂಗಡಿಯ ಬಲಭಾಗದ ಕಸದ ರಾಶಿಗೆ ಬೆಂಕಿ ಹಚ್ಚುತ್ತಿದ್ದಾಗ ಭಾರೀ ಸ್ಪೋಟದ ಶಬ್ದ ಕೇಳಿಬಂದಿದೆ. ಈ ಶಬ್ದದಿಂದಾಗಿ ಸುತ್ತಮುತ್ತಲಿನ ಜನ ಆತಂಕಗೊಂಡರು. ಸ್ಥಳೀಯರು ಕಸದ ರಾಶಿಯನ್ನು ಪರಿಶೀಲಿಸಿದಾಗ, ಶಂಕಾಸ್ಪದ ಲೋಹದ ವಸ್ತುವೊಂದು ಪತ್ತೆಯಾಗಿದೆ. ಕೂಲಂಕಷವಾಗಿ ಗಮನಿಸಿದಾಗ, ಒಂದು ನಾಡಪಿಸ್ತೂಲ್ ಮತ್ತು ಎರಡು ನಿಷ್ಕ್ರಿಯ ಗುಂಡುಗಳು ಇರುವುದು ದೃಢಪಟ್ಟಿದೆ. ತಕ್ಷಣವೇ ಮಾಳಪ್ಪ ಅವರು ಕಾಳಗಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ, ಪೊಲೀಸರು ಸ್ಥಳಕ್ಕೆ ಧಾವಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಿಸ್ತೂಲ್ ಯಾರದ್ದು, ಮತ್ತು ಅದು ಹೇಗೆ ಕಸದ ರಾಶಿಗೆ ಬಂತು ಎಂಬುದರ ಕುರಿತು ಶೋಧ ನಡೆಸಲಾಗುತ್ತಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳದೊಂದಿಗೆ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಈ ಸಂಬಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
