ತುಮಕೂರು:
ನೆಗಡಿ, ಕೆಮ್ಮಿನಲ್ಲಿ ಸಾಗಿದೆ ಜೀವನಚಕ್ರ..| ಹೊಟ್ಟೆಪಾಡಿಗಾಗಿ ಅವಿರತ ದುಡಿಮೆ
ಕೋವಿಡ್ ಮೂರನೇ ಅಲೆಯಲ್ಲಿ ಇಡೀ ರಾಜ್ಯ ನೆಗಡಿ, ಕೆಮ್ಮು, ವೈರಲ್ ಜ್ವರಗಳಿಂದ ಬಾಧಿಸುತ್ತಿದ್ದರೂ ಜೀವನ ಚಕ್ರ ನಿರಂತರವಾಗಿ ಸಾಗಿದ್ದು, ದಿನವೊಂದಕ್ಕೆ 50 ಸಾವಿರ ಸಂಖ್ಯೆಯಲ್ಲಿ ಹೊಸ ಸೋಂಕಿತರೂ ಪತ್ತೆಯಾಗಿದ್ದರೂ , ಸೋಂಕನ್ನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ಜನರು ಅವಿರತ ದುಡಿಮೆಯಲ್ಲಿ ತೊಡಗಿರುವುದು ಸಾಮಾನ್ಯ ಜನರ ಭವಣೆಯ ಪ್ರತೀಕವೆನಿಸಿದೆ.
ರಾಜ್ಯದಲ್ಲಿ ಭಾನುವಾರ ಒಂದೇ ದಿನ 50210 ಸಂಖ್ಯೆಯಲ್ಲಿ ಹೊಸ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 3,57,796 ಸಕ್ರಿಯ ಪ್ರಕರಣಗಳಿವೆ. ಶೇ.22.77ರಷ್ಟು ಪಾಸಿಟಿವಿಟಿ ದರ ಇಲಾಖೆ ಅಂಕಿ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ,
ವಾಸ್ತವವಾಗಿ ಕರುನಾಡಿನ 6 ಕೋಟಿ ಮೀರಿದ ಜನಸಂಖ್ಯೆಯ ಶೇ.80 ರಷ್ಟು ಮಂದಿ ಕೆಮ್ಮ, ಜ್ವರ, ನೆಗಡಿ ಬಾಧಿತರಾಗಿದ್ದಾರೆ. ಆದರೂ ಹೊರರೋಗಿಯಾಗಿ ಚಿಕಿತ್ಸೆ ಪಡೆದು, ಮಾತ್ರೆ ನುಂಗಿ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದು, ಬದುಕಲು ಶ್ರಮದ ದುಡಿಮೆ, ವ್ಯಾಪಾರ ಎಲ್ಲಾ ವರ್ಗದವರಿಗೂ ಅನಿವಾರ್ಯವೆನಿಸಿದೆ.
ಶಾಲೆ ಮುಚ್ಚದಿದ್ದರೆ ಸಾಕು ಎನ್ನುತ್ತಿವೆ ಆಡಳಿತಮಂಡಳಿ:
ಕಳೆದ ಎರಡು ವರ್ಷಗಳಿಂದ ಸಮರ್ಪಕ ದಾಖಲಾತಿ, ಶುಲ್ಕ ಪಾವತಿಯಿಲ್ಲದೆ ಸೊರಗಿದ್ದು ಶಿಕ್ಷಣ ಸಂಸ್ಥೆಗಳು ಈ ಬಾರಿ 3ನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾದರೂ ಮುಂಜಾಗ್ರತ ಕ್ರಮ ಪಾಲಿಸಿ ಶಾಲೆ ನಡೆಸುವ ಅನಿವಾರ್ಯ ಸ್ಥಿತಿಗೆ ಬಂದಿದ್ದು,
ಪೂರ್ಣ ಶುಲ್ಕಪಾವತಿಗೆ ಪೋಷಕರಿಗೆ ಮೇಲಿಂದ ಮೇಲೆ ಕರೆ, ಒತ್ತಡಹೇರಲಾರಂಭಿಸಿದ್ದಾರೆ. ಬೋಧಕ, ಬೋಧಕೇತರ ವರ್ಗದವರಿಗೆ ವೇತನ ನೀಡಿ, ಶಾಲಾ-ಕಾಲೇಜು ಅಸ್ಥಿತ್ವ ಉಳಿಸಿಕೊಳ್ಳಬೇಕಾಗಿರುವ ಸವಾಲು ವಿದ್ಯಾಸಂಸ್ಥೆಗಳಿಗೆ ಎದುರಾಗಿದೆ.
ಇನ್ನೂ ಕೋವಿಡ್ ಲಾಕ್‍ಡೌನ್, 50:
50 ರೂಲ್ಸ್‍ನಿಂದಾಗಿ ಭಾರೀ ಹೊಡೆತ ಅನುಭವಿಸಿದ ಹೋಟೆಲ್, ಉಪಹಾರ ಮಂದಿರಗಳು ತಿಂಗಳಾರಂಭದಲ್ಲಿ ಹೇರಲಾದ ವೀಕೆಂಡ್ ಕರ್ಫ್ಯೂಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ವರ್ತಕ ವಲಯ, ಕೈಗಾರಿಕೋದ್ಯಮಿಗಳು ಸಹಕ ಕೋವಿಡ್‍ನಿಂದ ಕಂಗೆಟ್ಟಿದ್ದು,
ಉದ್ಯಮ ನಿರ್ವಹಣೆ, ಅಂಗಡಿ ಬಾಡಿಗೆ. ಸಾಲದ ಕಂತು ಪಾವತಿಸಲು ವ್ಯವಹಾರ ಮಾಡದಿದ್ದರೆ ವಿಧಿಯಿಲ್ಲ ಎಂಬ ಸ್ಥಿತಿ ತಲುಪಿದ್ದಾರೆ. ಇನ್ನೂ ಖಾಸಗಿ ನೌಕರರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ದಿನಗೂಲಿ ನೌಕರರೆಲ್ಲ, ಕೋವಿಡ್ ಆದ್ರೂ ಬರಲಿ, ಓಮ್ರಿಕಾನ್ ಆದ್ರೂ ಬರಲಿ ನಾವು ದುಡಿದೇ ತಿನ್ನಬೇಕು ಎನ್ನುತ್ತಾ ಬೆವರು ಹರಿಸಿ ಸಂಪಾದಿಸಲು ಹಾತೊರೆಯುತ್ತಿದ್ದಾರೆ.
ಸರಕಾರ ಖಜಾನೆ ತುಂಬಿಸಿಕೊಳ್ಳಲು ಕಸರತ್ತು:
ಮತ್ತೊಂದೆಡೆ ಕೋವಿಡ್ ಸರಕಾರದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡಿದ್ದು, ಅಭಿವೃದ್ಧಿ ಕಾಮಗಾರಿಗಳು ಹಣದ ಅಭಾವ ಎದುರಾಗಿದೆ. ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಖಜಾನೆ ತುಂಬಿಸಿಕೊಳ್ಳಲು ಸರಕಾರದ ವಿವಿಧ ಸೇವಾ ಶುಲ್ಕಗಳ ಹೆಚ್ಚಳದ ಪ್ರಯೋಗಕ್ಕೆ ಇಲಾಖೆಗಳು ಪ್ರಸ್ತಾವನೆ ಸಲ್ಲಿಸುತ್ತಿವೆ.
ಆದಾಯ ಮೂಲವಾದ ಅಬ್ಕಾರಿ ಇಲಾಖೆ, ನೋಂದಣಿ ಇಲಾಖೆ, ಸಾರಿಗೆ ಸೇರಿದಂತೆ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಕರ ವಸೂಲಿಯಲ್ಲಿ ಶೇ.100ರಷ್ಟು ಪ್ರಗತಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಬೇಕೆಂದು ಟಾರ್ಗೆಟ್ ನೀಡಲಾಗಿದೆ.
ಇಕಾಮರ್ಸ್ ವಹಿವಾಟು ಹೆಚ್ಚಳ:
ಇನ್ನೂ ಹಣಕಾಸು ಸಂಸ್ಥೆಗಳು ಸಹ ಸಾಲದ ಬಡ್ಡಿದರವನ್ನು ಏರಿಸುವ ಸಾಹಸಕ್ಕೆ ಕೈ ಹಾಕದೆ ಜನರಲ್ಲಿ ಆರ್ಥಿಕ ಶಕ್ತಿತುಂಬಲು ವಿಧವಿಧವಾದ ಸಾಲಗಳನ್ನು ಪರಿಚಯಿಸುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಆರ್ಥಿಕ ವಂಚನೆ, ದೋಖಾ, ಆನ್‍ಲೈನ್‍ನಲ್ಲಿ ಹೆಚ್ಚಾಗುತ್ತಿದೆ. ಗೃಹೋಪಯೋಗಿ ಉಪಕರಣಗಳು, ಮೊಬೈಲ್ ಆಟೊಮೊಬೈಲ್ ಮಾರಾಟದಲ್ಲೂ ಹಲವು ಆಫರ್‍ಗಳನ್ನು ಘೋಷಿಸಲಾಗದ್ದು, ಆಫ್‍ಲೈನ್‍ಗಿಂತಲೂ ಇಕಾಮರ್ಸ್ ವ್ಯವಹಾರ ಕೋವಿಡ್ ಕಾಲಘಟ್ಟದಲ್ಲಿ ಅಧಿಕಗೊಂಡಿದೆ.
ಆಡಿಸಿನೋಡು ಬೀಳಿಸಿನೋಡು ಉರುಳಿಹೋಗದು ಎಂಬ ಗೀತೆಯ ಸಾಲಿನಂತೆ ಕೋವಿಡ್ ಅಲೆಗಳು ಎಷ್ಟೇ ಅಪ್ಪಳಿಸಿದರೂ ವ್ಯಾಕ್ಸಿನ್, ನಿಯಮಪಾಲನೆ ಮತ್ತಿತರ ಉಪಕ್ರಮಗಳಿಂದÀ ಜೀವಕ್ಕಿಂತ ಜೀವನವೇ ಮುಖ್ಯ ಎನ್ನುವ ಸ್ಥಿತಿಗೆ ಸಮಾಜ, ಜನಜೀವನ ಬಂದು ನಿಂತಿದೆ.
2ವರ್ಷದಲ್ಲಿ 4 ಕೋಟಿ ಭಾರತೀಯರು ಬಡವರು!
2020ರಿಂದ ಇಲ್ಲಿಯವರೆಗೆ ಕೋವಿಡ್ ಹೊಡೆತ, ಸರಕಾರದ ನೀತಿಗಳಿಂದಾಗಿ ಇಬ್ಬರು ವಾಣಿಜ್ಯೋದ್ಯಮಿಗಳ ಸಂಪತ್ತು ಮಾತ್ರ ಸಾವಿರಾರು ಕೋಟಿ ವೃದ್ಧಿಯಾಗಿದ್ದು, ಇದೇ ಸಮಯದಲ್ಲಿ 4 ಲಕ್ಷ ಭಾರತೀಯರು ಬಡತನ ರೇಖೆಯಿಂತ ನೂಕಲ್ಪಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಟ್ವೀಟ್ ಮೂಲಕ ದೇಶದ ದುಸ್ಥಿತಿಗೆ ಬಿಜೆಪಿ ಕಾರಣ ಎಂದು ಟೀಕಿಸಿದ್ದಾರೆ.
ಮೊದಲ ಡೋಸ್ ವ್ಯಾಕ್ಸಿನ್‍ನಲ್ಲಿ ಕರ್ನಾಟಕ ಶೇ.100ರ ಸಾಧನೆ
ಕೋವಿಡ್ ತೀವ್ರತೆ ತಗ್ಗಿಸುವಲ್ಲಿ ವ್ಯಾಕ್ಸಿನ್ ಪರಿಣಾಮಕಾರಿಯೆನಿಸಿದ್ದು, ಕೋವಿಡ್ ವ್ಯಾಕ್ಸಿನ್ ಕೊಡಲು ಆರಂಭಿಸಿದ ಕಳೆದೊಂದು ವರ್ಷಗಳಲ್ಲಿ ವ್ಯಾಕ್ಸಿನ್‍ಗೆ ಅರ್ಹರಾದ 4, 89,29,819 ಮಂದಿಗೆ ಮೊದಲ ಡೋಸ್ ವ್ಯಾಕ್ಸಿನ್ ಶೇ.100ರ ಗುರಿ ಸಾಧನೆ ಮಾಡಲಾಗಿದೆ ಎಂದು ಆರೋಗ್ಯಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
– ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ