ಹುಳಿಯಾರು:
ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದು ವಿಧಾನಸಭೆಯಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುತ್ತೇವೆಂದು ಹೇಳಿದ್ದೇನೆ. ವಿಧಾನಸಭೆಯಲ್ಲಿ ಆಶ್ವಾಸನೆ ಕೊಟ್ಟರೆ ಈಡೇರಿಸಲೇಬೇಕು. ಇಲ್ಲವಾದರೆ ಹಕ್ಕುಚ್ಯುತಿ ನಿರ್ಣಯವಾಗುತ್ತದೆ. ಹಾಗಾಗಿ ಜವಾಬ್ದಾರಿಯಿಂದ ಸಾಧಕ-ಬಾಧಕಗಳನ್ನು ಯೋಚಿಸಿಯೆ ಮಾತನಾಡಿದ್ದೇನೆ.
ಅದರಂತೆ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವುದು ಬಿಜೆಪಿಯ ಬದ್ಧತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಸಮೀಪ ರಾಮಪ್ಪನಹಟ್ಟಿಯಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಅಭಿನಂದಾ ಸಮಾರಂಭದಲ್ಲಿ ಕಾಡುಗೊಲ್ಲರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿದ ಮೇಲೆ ದೆಹಲಿಯಲ್ಲಿ ಕಡತ ಬೆನ್ನತ್ತುವವರು ಬೇಕಾಗಿದ್ದಾರೆ.
ಕೇಂದ್ರ ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗುವವರೆವಿಗೂ ನಾನೇ ಯಾರಿಗಾದರೂ ಸೂಚನೆ ಕೊಟ್ಟು ಬೆನ್ನತ್ತಿಸುವ ಕೆಲಸವನ್ನೂ ಮಾಡುತ್ತೇನೆ ಎಂದು ಮಾಧುಸ್ವಾಮಿ ಭರವಸೆ ನೀಡಿದರು.
ಗೊಲ್ಲರಹಟ್ಟಿ ಹಾಗೂ ಲಂಬಾಣಿ ತಾಂಡ್ಯಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇವೆ. ಶೀಘ್ರದಲ್ಲೇ ಈ ಕುರಿತು ಅಧಿಸೂಚನೆ ಹೊರಡಿಸುತ್ತೇವೆ. ಅಲ್ಲದೆ 100 ಕುಟುಂಬದ ಪಡಿತರ ಚೀಟಿ ಇರುವ ತಾಂಡ್ಯ ಮತ್ತು ಗೊಲ್ಲರಹಟ್ಟಿಯಲ್ಲೆ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಲಾಗುವುದು ಎಂದರಲ್ಲದೆ ಕಾಡುಗೊಲ್ಲ ನಿಗಮ ಮಂಡಳಿಗೆ ಶೀಘ್ರದಲ್ಲೆ ಅಧ್ಯಕ್ಷರನ್ನು ನೇಮಕ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ, ತುಮಕೂರು ಜಿಲ್ಲಾ ಕಾಡುಗೊಲ್ಲರ ಸಂಘದ ಚಂಗಾವರ ಕರಿಯಣ್ಣ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಶಿವಣ್ಣ, ಡಿವೈಎಸ್‍ಪಿ ಬಸವರಾಜು, ತಾಪಂ ಮಾಜಿ ಸದಸ್ಯ ಕೇಶವಮೂರ್ತಿ,
ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ, ಜಿಪಂ ಮಾಜಿ ಸದಸ್ಯೆ ಮಂಜುಳಮ್ಮ, ಗ್ರಾಪಂ ಅಧ್ಯಕ್ಷರುಗಳಾದ ಕೆಎಂಎಲ್ ಕಿರಣ್, ಚಿಕ್ಕಣ್ಣ, ಮುಖಂಡರಾದ ವಿಶ್ವನಾಥ್, ನಿರಂಜನ್, ರಾಮಣ್ಣ, ಮೋಹನ್, ಚಿತ್ತಪ್ಪ, ಈಶರಣ್ಣ, ಬಸವರಾಜು, ಮಹಾಲಿಂಗಯ್ಯ, ಈರಣ್ಣ, ರಮೇಶ್ ಸೇರಿಸಂತೆ ಅನೇಕರು ಉಪಸ್ಥಿತರಿದ್ದರು.
ಸಣ್ಣ ನೀರಾವರಿ ಖಾತೆ ತೆಗೆದರೂ ಚಿಂತೆಯಿಲ್ಲ :
ದೊಡ್ಡ ದೊಡ್ಡ ಖಾತೆ ಕೊಟ್ಟರೂ ಸಣ್ಣ ನೀರಾವರಿ ಖಾತೆಗೆ ಪಟ್ಟು ಹಿಡಿದು ಪಡೆದಿದ್ದೇನೆ. ಈ ಖಾತೆಯ ಮೂಲಕ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ 260 ಕೋಟಿ ರೂ. ಹಣ ಮೀಸಲಿಟ್ಟು 180 ಕೆರೆಗಳಿಗೆ ನೀರು ಕೊಡುವ ಕೆಲಸ ಆರಂಭಿಸಿದ್ದೇನೆ. ತಿಪಟೂರು ತಾಲ್ಲೂಕಿಗೆ 200 ಕೋಟಿ ರೂ. ಕೊಟ್ಟಿದ್ದೇನೆ. ಬೆಳ್ಳಾವಿ, ಕೋರಾ ಕೆರೆಗೆ ನೀರು ಕೊಡಲು 265 ಕೋಟಿ ರೂ. ಮಂಜೂರು ಮಾಡಿದ್ದೇನೆ.
ತುರುವೇಕೆರೆಗೆ 70 ಕೋಟಿ ರೂ., ಧರ್ಮಪುರ ಕೆರೆಗೆ ನೀರು ತರಲು 90 ಕೋಟಿ ರೂ. ಕೊಟ್ಟಿದ್ದೇನೆ. ತುಮಕೂರಿನ 16 ಕೆರೆಗಳನ್ನು ಬೆಂಗಳೂರಿನ ಶುದ್ಧಿಕರಿಸಿದ ನೀರಿನಿಂದ ತುಂಬಿಸಲು 800 ಕೋಟಿ ರೂ. ನೀಡಿದ್ದೇನೆ. ಇಷ್ಟೆಲ್ಲಾ ಮಾಡಿದ ಮೇಲೆ ಈ ಖಾತೆ ಇದ್ದರೇನು ಹೋದರೇನು ಎನ್ನುವ ಸ್ಥಿತಿಗೆ ಬಂದಿದ್ದೇನೆ. ಈಗ ಈ ಖಾತೆ ತೆಗೆದರೂ ಚಿಂತೆಯಿಲ್ಲ.
-ಜೆ.ಸಿ.ಮಾಧುಸ್ವಾಮಿ, ಸಚಿವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ