ದೇವನಹಳ್ಳಿ:
ಆಟೋಗೆ ದಾರಿ ಕೊಡಲಿಲ್ಲ ಎಂದು ಕೆಎಸ್ಆರ್ಟಿಸಿ ಬಸ್ ಚಾಲಕನ ಮೇಲೆ ಆಟೋ ಚಾಲಕ ಮತ್ತು ಸಂಗಡಿಗರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಾಡೇಶ್ವರ ಗ್ರಾಮದಿಂದ ದೊಡ್ಡಬೆಳವಂಗಲಕ್ಕೆ ಬಸ್ ಹೋಗುತ್ತಿತ್ತು. ಈ ವೇಳೆ, ಬಸ್ ಹಿಂದೆ ಆಟೋವೊಂದು ಬಂದಿದ್ದು, ಆಟೋಗೆ ದಾರಿ ಕೊಡಲಿಲ್ಲ ಎಂದು ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಕರ್ತವ್ಯ ನಿರತ ಕೆಎಸ್ಆರ್ಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯ ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಿನ್ನೆ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಯಿಂದ ಚಾಲಕನನ್ನ ರಕ್ಷಿಸಲು ಹೋದ ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಗಾಯಗೊಂಡ ಬಸ್ ಚಾಲಕ ಪ್ರಸನ್ನ ಅವರನ್ನು ಸ್ಥಳೀಯ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಾಲಕನ ಮೇಲೆ ಹಲ್ಲೆ ನಡೆಸಿದ ಗೋವಿಂದರಾಜು, ಹನುಮಂತರಾಜು, ನರಸಿಂಹರಾಜು ಎಂಬುವವರನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ