ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಹನಿಟ್ರ್ಯಾಪ್ ಪಿತಾಮಹ ಎಂದು ಟೀಕೆ ಮಾಡಿರುವ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಿರುದ್ಧ ರಾಜ್ಯ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಹರಿಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಆಕಾಶಕ್ಕೆ ಉಗುಳಿದರೆ ನಾನು ದೊಡ್ಡ ಮನುಷ್ಯನಾಗುತ್ತೇನೆ” ಎಂಬ ಹುಂಬತನದಲ್ಲಿ ಅತಿರೇಕದ, ಅವಿವೇಕದ, ಕೊಳಕು ಹೇಳಿಕೆಗಳನ್ನು ಬಿಕೆ ಹರಿಪ್ರಸಾದ್ ನೀಡುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಾಂಗ್ರೆಸ್ ಆಳ್ವಿಕೆಯ ಕೊಳಕುಗಳನ್ನು ಸ್ವಚ್ಛ ಮಾಡಿದ್ದು, ಮಹಾತ್ಮ ಗಾಂಧಿಯವರು ಆರಂಭಿಸಿದ ಸ್ವಚ್ಛ ಭಾರತ ಹಾಗೂ ಸ್ವದೇಶಿ ಚಳುವಳಿಯ ಕನಸನ್ನು ಅಕ್ಷರಶಃ ನನಸು ಮಾಡಿದ್ದು ದೇಶದ ಹೆಮ್ಮೆಯ ಪುತ್ರ ಪ್ರಧಾನಿ ಪ್ರಧಾನಿ ಮೋದಿ ಎನ್ನುವುದನ್ನು ನೀವೂ ಸೇರಿದಂತೆ ನಿಮ್ಮ ಕಾಂಗ್ರೆಸ್ಸಿಗರು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ,
ನಿಮ್ಮ ಪಕ್ಷದ ತಟ್ಟೆಯಲ್ಲಿ ಹಗರಣಗಳು ಎಂಬ ಹೆಗ್ಗಣಗಳು ಸತ್ತು ಬಿದ್ದಿವೆ ಇದರ ಬೆನ್ನಲೇ ವಿಕೃತಿ ಮನಸ್ಥಿಯ ಸೇಡಿನ ರಾಜಕಾರಣದ ಹನಿಟ್ರ್ಯಾಪ್ ದಳ್ಳುರಿ ನಿಮ್ಮ ಕಾಂಗ್ರೆಸ್ ಮನೆಯನ್ನು ಸುಡುತ್ತಿದೆ, ಇಷ್ಟಾದರೂ ಪಾಠ ಕಲಿಯದ ನೀವು ಪರಿಶುದ್ಧ ಸರೋವರಕ್ಕೆ ಮಲಿನಗೊಂಡ ಕಲ್ಲು ಎಸೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ,
ಹನಿ ಟ್ರ್ಯಾಪ್ ಕುರಿತಾದ ಹೇಳಿಕೆ ನಿಮ್ಮ ಮಲಿನಗೊಂಡ ಮನಸ್ಥಿತಿ, ಹರಕು ನಾಲಿಗೆಯ ವ್ಯಕ್ತಿತ್ವವನ್ನು ಪರಿಚಯಿಸಿದೆ, ನಾಮಕರಣ ಅಧಿಕಾರ ಬಲದಿಂದ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ನೀವು, ಕೀಳು ಅಭಿರುಚಿ ಹೇಳಿಕೆಗಳನ್ನು ನೀಡಿ ನಿಮ್ಮ ಹೈ ಕಮಾಂಡ್ ಅಂಗಳವನ್ನು ವಿಕೃತ ಕುಶಿ ಪಡಿಸಲು ಹೊರಟಿದ್ದೀರಿ ಎಂಬುದು ಬಹಿರಂಗ ಸತ್ಯ.
ರಾಜ್ಯ ರಾಜಕಾರಣದಲ್ಲಿ ಪ್ರಾಮುಖ್ಯತೆಯಿಲ್ಲದ ರಾಜಕಾರಣಿ ನೀವು ಎಂಬುದು ಜನರಿಗೆ ಗೊತ್ತಿದೆ, ಕಾಂಗ್ರೆಸ್ ವಲಯದಲ್ಲೂ ನಿಮ್ಮನ್ನು ಮೂಲೆಗೊತ್ತಿದ್ದಾರೆ, ನಿಮಗೆ ಅರ್ಹತೆ, ಯೋಗ್ಯತೆ ಇದ್ದಿದ್ದರೆ ಕಳೆದ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿ ಕಾಂಗ್ರೆಸ್ ನಲ್ಲಿ ಮುಂಚೂಣಿ ನಾಯಕರಾಗಿದ್ದ ನಿಮ್ಮನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕನಿಷ್ಠ ಮಂತ್ರಿಯಾಗಿಸಲೂ ಪರಿಗಣಿಸಲಿಲ್ಲವೇಕೆ? ಎಂದರೆ ಅರ್ಹತೆಯ ಪಟ್ಟಿಯಲ್ಲಿ ನಿಮಗಿರುವ ಯೋಗ್ಯತೆಯ ಸ್ಥಾನ ಮನನವಾಗುತ್ತದೆ.
ಸದ್ಯ ನೀವೊಬ್ಬ ವಿಧಾನ ಪರಿಷತ್ ಸದಸ್ಯರು ಎಂಬ ಸ್ಥಾನ ಗೌರವ ಮಾತ್ರ ನಿಮಗಿದೆಯೇ ಹೊರತು ಸಾಮಾಜಿಕವಾಗಿ, ರಾಜಕೀಯವಾಗಿ ಯಾವ ಕ್ಷೇತ್ರದಲ್ಲೂ ಗೌರವದ ಸ್ಥಾನ ಉಳಿಸಿಕೊಂಡಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ನಿಮ್ಮ ಕೊಳಕು ಹೇಳಿಕೆಗಳಿಗೆ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಪ್ರಧಾನಿ ಮೋದಿ ಅವರನ್ನು ಪದೇಪದೇ ಉಲ್ಲೇಖಿಸಿ ವಿಕೃತ ಪ್ರಚಾರ ಪಡೆಯುವ ನಿಮ್ಮ ಹೀನ ನಡೆಯನ್ನು ಜನರ ಮುಂದಿಡಲು ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ.
ನೀವೊಬ್ಬ ಹಿರಿಯ ರಾಜಕಾರಣಿಯಾಗಿ ನಿಮಗೆ ಸಾಮಾಜಿಕ ಬದ್ಧತೆ ಇದ್ದರೆ, ರಾಜಕೀಯ ಬದ್ಧತೆ ಇದ್ದರೆ, ನೀವೊಬ್ಬ ನೈಜ ಕಾಂಗ್ರೆಸಿಗರೇ ಆಗಿದ್ದರೆ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಭ್ರಷ್ಟ ಹಗರಣಗಳ ಹಾಗೂ ಹನಿ ಟ್ರ್ಯಾಪ್ ಪ್ರಕರಣದ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಿಸಿ ನಿಮ್ಮ ನೈತಿಕತೆ ಉಳಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
