ಬಾಗಲಕೋಟೆ: ಕುಸಿದ ಬಿಳಿಜೋಳದ ಬೆಲೆ,ಕಂಗಾಲಾದ ರೈತರು

ಬಾಗಲಕೋಟೆ

     ಬಾಗಲಕೋಟೆ  ಜಿಲ್ಲೆಯಲ್ಲಿ ಬಿಳಿಜೋಳ  ಪ್ರಮುಖ ಬೆಳೆಯಾಗಿದೆ. ಆದರೆ, ಬಿಳಿಜೋಳ ಬೆಲೆ ಈಗ ದಿಢೀರ್ ಪಾತಾಳಕ್ಕೆ ಕುಸಿದಿದ್ದು ರೈತರ ಮುಖ ಕಪ್ಪಾಗಿದೆ. 70 ಕೆಜಿ ಪ್ಯಾಕೆಟ್ ಗೆ 1800ರಿಂದ 2500 ರೂ ಇದ್ರೆ ಕ್ವಿಂಟಲ್ ಬಿಳಿಜೋಳಕ್ಕೆ 2500 ಹೆಚ್ಚೆಂದರೆ 3 ಸಾವಿರ ಬೆಲೆ ಇದೆ. ಮೇಲಾಗಿ ಮಾರುಕಟ್ಟೆಗೆ ಬರುವ ಜೋಳದ ಪ್ರಮಾಣ ಕೂಡ ಕಡಿಮೆಯಾಗಿದೆ. ಬೆಲೆ ಇಳಿಕೆಯಿಂದ ರೈತರು ಜೋಳ ಬದಲಿಗೆ ಕಡಲೆ ಕಡೆ ಹೆಚ್ಚು ಗಮನ ಹರಿಸಿದ್ದು, ಮಾರುಕಟ್ಟೆಯಲ್ಲಿ ಜೋಳದ ವ್ಯಾಪಾಸ್ಥರಿಗೂ ಹೆಚ್ಚು ಜೋಳ ಸಿಗುತ್ತಿಲ್ಲ. ಜೊತೆಗೆ ಉತ್ತಮ ಗುಣಮಟ್ಟದ ಜೋಳ ಸಿಗುತ್ತಿಲ್ಲವಂತೆ. ಇದರಿಂದ ನಮಗೂ ಹೆಚ್ಚು ಲಾಭಾಂಶ ಸಿಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

    ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ವರ್ಷ ಹಿಂಗಾರಿನಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬೆಳೆಯತ್ತಿದ್ದರು. 2-3 ವರ್ಷದ ಹಿಂದೆ ಬಿಳಿಜೋಳಕ್ಕೆ ಒಂದು ಕ್ವಿಂಟಲ್​ಗೆ 7-8 ಸಾವಿರ ರೂ. ಬೆಲೆ ಸಿಗುತ್ತಿತ್ತು. ಆದರೆ, ಈಗ ಕ್ವಿಂಟಲ್​ಗೆ 2500 ರಿಂದ 3000 ಕ್ಕೆ ಬೆಲೆ ಇಳಿಕೆಯಾಗಿದೆ. ಈ ಮಧ್ಯೆ ಬೆಲೆ ಮೇಲಿಂದ ಮೇಲೆ ಇಳಿಕೆಯಾಗುತ್ತಿರುವುದರಿಂದ ರೈತರು ಬಿಳಿಜೋಳ ಬಿತ್ತನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಬಿಳಿಜೋಳ ಬೆಳೆಯುವ ಪ್ರದೇಶ 70 ಸಾವಿರ ಹೆಕ್ಟೇರ್​ಗೆ ಇಳಿಕೆಯಾಗಿದೆ. ಬೆಲೆ ಇಳಿಕೆ ಬಿಳಿ ಜೋಳದಿಂದ ರೈತರು ವಿಮುಖವಾಗುವಂತೆ ಮಾಡಿದೆ.

   ಬಿಳಿ ಜೋಳವನ್ನು ಬೆಳೆಯಲು ಎಕರೆಗೆ 15ರಿಂದ 20 ಸಾವಿರ ರೂ. ಖರ್ಚು ಮಾಡುತ್ತಾರೆ. ಎಕರೆಗೆ ಬಿಳಿಜೋಳ 3-4 ಕ್ವಿಂಟಲ್ ಬೆಳೆಯಬಹುದು. ಆದರೆ ಈ ಬೆಲೆಯಲ್ಲಿ ಹಾಕಿದ ಬಂಡವಾಳ ಕೂಡ ಬಾರದಂತಾಗಿದೆ. ಆದರೂ ಕೆಲ ರೈತರು ಬಂದಷ್ಟು ಬರಲಿ ಅಂತ ಮಾರಾಟ ಮಾಡಿದರೆ ಕೆಲ ರೈತರು ಮನೆಯಲ್ಲಿ ಜೋಳ ಇಟ್ಟುಕೊಂಡು ಕೂತಿದ್ದಾರೆ.