ಚಂಡೀಗಢ:
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಸೇಡು ತೀರಿಸಿಕೊಂಡಿದೆ. ಇದೀಗ ಈ ಕಾರ್ಯಾಚರಣೆ ಬಗ್ಗೆ ವ್ಯಂಗ್ಯವಾಡಿದ ಪಂಜಾಬ್ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖಂಡ ಭಗವಂತ್ ಮಾನ್ ವಿವಾದ ಮೈಮೇಲೆ ಎಳದುಕೊಂಡಿದ್ದಾರೆ. ʼʼಆಪರೇಷನ್ ಸಿಂದೂರ್ ಹೆಸರಿನಲ್ಲಿ ಬಿಜೆಪಿ ವೋಟು ಪಡೆದುಕೊಳ್ಳಲು ಹವಣಿಸುತ್ತಿದೆ. ಬಿಜೆಪಿಯವರು ಸಿಂದೂರವನ್ನು ತಮಾಷೆಯ ವಸ್ತುವನ್ನಾಗಿಸಿದ್ದಾರೆ. ಬಿಜೆಪಿ ಪ್ರತಿ ಮನೆಗೆ ಸಿಂದೂರವನ್ನು ಕಳುಹಿಸುತ್ತಿದೆಯಂತೆ.
ನೀವು (ಮಹಿಳೆಯರು) ಸಿಂದೂರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಇಟ್ಟುಕೊಳ್ಳುತ್ತೀರಾ? ಇದು ʼಒಂದು ದೇಶ, ಒಬ್ಬ ಪತಿʼ ಯೋಜನೆಯೆ?ʼʼ ಎಂದು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಸದ್ಯ ಅವರ ಈ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಲುಧಿಯಾನಾದಲ್ಲಿ ನಡೆಯುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಪರೇಷನ್ ಸಿಂದೂರ್ ಹೆಸರಿನಲ್ಲಿ ಮತ ಯಾಚಿಸುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈ ಕಾರ್ಯಾಚರಣೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
26 ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಅಭಿಯಾನ ನಡೆಸುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಬಿಜೆಪಿ ಪ್ರತಿ ಮನೆಗೆ ಸಿಂದೂರವನ್ನು ಕಳುಹಿಸುವುದಾಗಿ ಘೋಷಿಸಿದೆ ಎಂದು ವರದಿಗಳು ಬಂದಿದ್ದವು. ಆದರೆ ಈ ಸುದ್ದಿಯನ್ನು ಮಾಧ್ಯಮ ಸಂಸ್ಥೆಗಳು ತಳ್ಳಿ ಹಾಕಿವೆ.
ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ ಎನ್ನುವ ಹೆಸರಿಟ್ಟಿದ್ದಕ್ಕೆ ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರನ್ನು ಟೀಕಿಸಿದ್ದರು. “ಆಪರೇಷನ್ ಸಿಂದೂರ್ ಎಂಬ ಹೆಸರನ್ನು ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಬಳಿಸಿದೆ. ಪ್ರಧಾನಿ ರಾಜಕೀಯ ಪ್ರಚಾರದ ಉದ್ದೇಶದಿಂದ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು. “ಮೊದಲ ಮೋದಿ ತಮ್ಮನ್ನು ಚಹಾ ಮಾರಾಟಗಾರ ಎಂದು ಬಣ್ಣಿಸಿಕೊಂಡರು. ನಂತರ ತಮ್ಮನ್ನು ಕಾವಲುಗಾರ ಎಂದು ಕರೆದುಕೊಂಡರು. ಈಗ ಅವರು ಸಿಂದೂರ ಮಾರಾಟ ಮಾಡಲು ಇಲ್ಲಿಗೆ ಬಂದಿದ್ದಾರೆ” ಎಂದು ಅವರು ಹೇಳಿದ್ದರು. ಉಗ್ರರ ವಿರುದ್ದ ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ ಎನ್ನುವ ಹೆಸರನ್ನು ಖುದ್ದು ಪ್ರಧಾನಿ ಮೋದಿ ಅವರೇ ಇಟ್ಟಿದ್ದರು.
ಆಪರೇಷನ್ ಸಿಂದೂರ್ ಕುರಿತು ಕೆಲವು ದಿನಗಳ ಹಿಂದೆ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ವ್ಯಂಗ್ಯವಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಫೋಟೊವೊಂದನ್ನು ತಮ್ಮಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದ ಅವರು ʼಒನ್ ನೇಷನ್ ಒನ್ ಹಸ್ಬಂಡ್ʼ ಎಂದು ಬರೆದುಕೊಂಡು ʼʼಮೋದಿ ಸರ್ಕಾರ ಪ್ರತಿಯೊಂದು ಮನೆಗೆ ಸಿಂದೂರವನ್ನು ಕಳುಹಿಸಲಿದೆ. ಇದು ಒಂದು ತಿಂಗಳು ನಡೆಯಲಿದೆʼʼ ಎಂದಿದ್ದರು. ಇದಕ್ಕೆ ನೆಟ್ಟಿಗರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.








