ಮುಂಬೈ:
ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ವೇಗವಾಗಿ ಬಂದ ಕಾರ್, ಹರಿದ ಪರಿಣಾಮ 16 ವರ್ಷದ ಹುಡುಗ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 5 ಮಂದಿಗೆ ಗಾಯವಾಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಇಂದು ಮುಂಜಾನೆ ಥಾಣೆಯ ಶಾಹಪುರದಲ್ಲಿ ಈ ಘಟನೆ ಸಂಭವಿಸಿದ್ದು, ಬಲಿಯಾದವರು ಹಾಗೂ ಗಾಯಗೊಂಡವರು ನಾಶಿಕ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಾ ರಸ್ತೆ ಬದಿ ನಿಂತಿದ್ದರು. ಕಿನವಲಿ ಸೇತುವೆ ಬಳಿ ಬೆಳಗ್ಗೆ 7ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಪೈಕಿ ನಾಲ್ವರು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ. ಗಾಯಗೊಂಡವರ ಪೈಕಿ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಹಾಗೂ ದಂಪತಿ ಸೇರಿದ್ದಾರೆ. ಥಾಣೆ ಸರಕಾರಿ ಆಸ್ಪತ್ರೆಯಿಂದ ಶಹಾಪುರ ಗ್ರಾಮೀಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆ ನಡೆದ ಸ್ಥಳ್ಕಕೆ ಸ್ಥಳೀಯ ಶಾಸಕ ಪಾಂಡುರಾಂಗ್ ಬರೋರಾ ಭೇಟಿ ನೀಡಿದ್ದು, ಅಪಘಾತವಾದಲ್ಲಿ ಕಾರ್ ಡಿಕ್ಕಿ ಹೊಡೆದ ಬಳಿಕ ಕೆಲವರು ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ