ಬಳ್ಳಾರಿ:
ನಗರದ ಚೈತನ್ಯ ಬುಕ್ ಸ್ಟಾಲ್ ಎದುರಿನ ತ್ಯಾಜ್ಯ ರಾಶಿಯ ತೊಟ್ಟಿಯಲ್ಲಿ ನವಜಾತ ಶಿಶು ವಿಲವಿಲನೆ ಒದ್ದಾಡುತ್ತಿರುವುದನ್ನು ಗಮನಿಸಿದ ದಾರಿಹೋಕರು ಆ ಮಗುವನ್ನು ಎತ್ತಿಕೊಂಡಿದ್ದಾರೆ. ಕೆಲವರು ಕುತೂಹಲಕ್ಕಾಗಿ ಗಂಡು ಅಥವಾ ಹೆಣ್ಣು ಮಗುನಾ ಎಂದು ಕೇಳುವ ದೃಶ್ಯಾವಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಸ್ವಲ್ಪ ದೂರದಲ್ಲಿ ಗಡಿಗಿ ಚನ್ನಪ್ಪ ವೃತ್ತ ಇದೆ. ಬಲಬದಿಯಲ್ಲಿ ಭಾರತ್ ಪೆಟ್ರೋಲ್ ಬಂಕ್ ಇದೆ. ತಿರುವಿನಲ್ಲಿ ನಾಲ್ಕಾರು ಅಂಗಡಿ, ಮುಂಗಟ್ಟುಗಳಿವೆ. ರಸ್ತೆಯ ಇಕ್ಕೆಲದಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ಸಾಲಾಗಿ ಕುಳಿತಿರುತ್ತಾರೆ. ಬಹಿರಂಗವಾಗಿಯೇ ವೇಶ್ಯೆಯರು ತಮ್ಮ ವೃತ್ತಿಯನ್ನು ನಡೆಸುತ್ತಿದ್ದರು. ಯಾರೊಬ್ಬರು ಧ್ವನಿ ಎತ್ತುತ್ತಿಲ್ಲ. ಅವರಲ್ಲದೇ, ಅಮಾಯಕ ಯುವತಿಯರನ್ನೂ ಈ ವೃತ್ತಿಗೆ ದಂಧೆಕೋರರು ದೂಡುತ್ತಿದ್ದಾರೆ ಎಂಬ ಅರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ.
ನವಜಾತ ಶಿಶು ರಕ್ಷಣೆ:
ದಾರಿ ಹೋಕರ ಸಮಯಪ್ರಜ್ಞೆಯಿಂದಾಗಿ ಆ ನವಜಾತ ಶಿಶು ಇಂದು ಬದುಕುಳಿದಿದೆ. ಮೆತ್ತನೆಯ ಸಮವಸ್ತ್ರದಲ್ಲಿ ಆ ಮಗುವನ್ನು ಸುತ್ತಿಟ್ಟು, ತೊಟ್ಟಿಯಲ್ಲಿ ಬಿಸಾಡಿ ಹೋಗಿದ್ದರು. ವಿಲವಿಲನೆ ಒದ್ದಾಡುತ್ತಿರುವುದನ್ನು ಗಮನಿಸಿದ ಪ್ರಯಾಣಿಕ ಮಹಿಳೆವೋರ್ವಳು ತನಗೆ ಧೈರ್ಯ ಸಾಲದೆ, ದಾರಿಹೋಕರನ್ನು ಕರೆದು ಮಗುವನ್ನು ಹೊರ ತೆಗೆಸಿದ್ದಾರೆ. ಮೆತ್ತನೆಯ ಬಟ್ಟೆಯಿಂದ ಅದರ ಮುಖಭಾಗವನ್ನು ತೆಗೆದಾಗ, ಮಗುವಿನ ಕಣ್ ರೆಪ್ಪೆ ಪಿಳುಕಿಸಿದಾಗ, ಬದುಕಿರುವುದು ಖಾತ್ರಿಯಾಗಿದೆ. ಕೂಡಲೇ ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ಮಗುವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ