ಬೆಂಗಳೂರು:
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ‘ಕನ್ನಡ ಒಕ್ಕೂಟ- ಕರ್ನಾಟಕ ರಾಜ್ಯ’ದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ‘ಕರ್ನಾಟಕ ಬಂದ್’ಗೆ ಕರೆ ನೀಡಿದ್ದು ಗೊತ್ತೇ ಇದೆ. ಮಾರ್ಚ್ 22 ರಂದು ನಡೆಯಲಿರುವ ಅಖಂಡ ಕರ್ನಾಟಕ ಬಂದ್ಗೆ ನಮ್ಮ ಬೆಂಬಲ ಇಲ್ಲ ಎಂದು ಚಾಲಕರ ಒಕ್ಕೂಟ ತಿಳಿಸಿದೆ. ಇದೀಗ ಹಾಗಾದರೆ ಬಂದ್ ನಡೆಯುವ ಬಗ್ಗೆ ವಾಟಾಳ್ ನಾಗರಾಜ್ ಅವರು ಹೇಳಿದ್ದೇನು?
ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ‘ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್’ ಮತ್ತು ‘ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಸಂಘಟನೆ’ಗಳು ಬೆಂಬಲ ನೀಡುವುದಿಲ್ಲ ಎಂದು ಬುಧವಾರ ಘೋಷಿಸಿವೆ.
ಇದೇ ವಿಚಾರವಾಗಿ ಮಾತನಾಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಅವರು ಬಂದ್ಗೆ ಬೆಂಬಲ ಇಲ್ಲ ಎಂದರು.
ಈ ಬಂದ್ ಚಾಲಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವಂತಿದೆ. ಬೆಂಗಳೂರಿನಲ್ಲಿ 75 ಸಾವಿರಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿವೆ. 2.5 ಲಕ್ಷಕ್ಕೂ ಅಧಿಕ ಕುಟುಂಬಗಳು ಚಾಲಕ ವೃತ್ತಿಯನ್ನು ಅವಲಂಬಿಸಿದ್ದಾರೆ. ಬಂದ್ ನಿಂದ ಇವರ ಬದಕು ದುಸ್ತರವಾಗಲಿದೆ. ಔಷಧ, ತರಕಾರಿ, ಹಾಲು, ಅಗತ್ಯ ವಸ್ತುಗಳ ಸಾಗಾಣೆ, ಶಾಲಾ ವಾಹನಗಳು ಸೇವೆ ಸ್ಥಗಿತಗೊಳಿಸಿದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಅವರು ವಿವರಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8 ಸಾವಿರಕ್ಕೂ ಅಧಿಕ ವಾಹನಗಳು ಸೇವೆ ನೀಡುತ್ತಿವೆ. ಸಿಟಿ ಟ್ಯಾಕ್ಸಿ, ಓಲಾ, ಊಬರ್, ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ ಚಾಲಕರು ಬೆಲೆ ಏರಿಕೆಯಿಂದಾಗಿ ತೊಂದರೆಯಲ್ಲಿದ್ದಾರೆ. ಇಎಂಐ, ವಾಹನ ವಿಮೆ ಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಾಜ್ಯ ಬಜೆಟ್ ನಲ್ಲೂ ಚಾಲಕ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಹೇಳಿದರು.
ಆದರೆ ಬಂದ್ ಗೆ ಸಂಘದ ಪದಾಧಿಕಾರಿಗಳು ಬೆಂಬಲ ನೀಡಲಿದ್ದು, ನಾವೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಆದರೆ ಚಾಲಕ ಸಮುದಾಯ ಬಂದ್ ಅನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಂದ್ ಮಾಡಿಯೇ ತೀರುತ್ತೇವೆ: ವಾಟಾಳ್ ನಾಗರಾಜ್ ಮಾರ್ಚ್ 22ರಂದು ಶನಿವಾರ ಬಂದ್ ನಡೆಯಲಿದೆ. ಮಾರ್ಚ್ 21ರಿಂದಲೇ ಎಸ್ಎಸ್ಎಲ್ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿವೆ. ಹೀಗಾಗಿ ಶಾಲಾ ಕಾಲೇಜುಗಳು ಎಂದಿನಂತೆ ಇರಲಿವೆ ಎಂದು ತಿಳಿದುಬಂದಿದೆ.
ಈ ಬಂದ್ ಕುರಿತು ಮಂಗಳವಾರ ಸಭೆ ನಡೆಸಿದ್ದ ವಾಟಾಳ್ ನಾಗರಾಜ್ ಅವರು, ನಿಗದಿತ ದಿನದಂದು ಬಂದ್ ಮಾಡುವುದು ಫಿಕ್ಸ್. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಅವರು ನೇರವಾಗಿ ಬೆಂಬಲಿಸಲು ಆಗಲ್ಲ. ಕನ್ನಡ ನೆಲ, ಜಲ, ಭಾಷೆ ಎಂದು ಬಂದಾಗ ಎಲ್ಲ ಕೈ ಜೋಡಿಸಬೇಕು. ಅನೇಕ ಸಂಘಟನೆಗಳು ನಮ್ಮೊಂದಿಗೆ ಕೈ ಜೋಡಿಸಿವೆ. ಬಂದ್ ಮಾಡಿಯೇ ತಿರುತ್ತೇವೆ ಎಂದಿದ್ದಾರೆ.
