ಬೆಂಗಳೂರು:
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ನಡೆಸಿದ ಕುಡಿತ ಮೋಜು ಮಸ್ತಿಯ ಫೋಟೋ ಹಾಗೂ ವಿಡಿಯೋ ದೃಶ್ಯಗಳು ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸ್ ಇಲಾಖೆ ಚುರುಕಾಗಿತ್ತು. ಇದಲ್ಲದೇ ಶಂಕಿತ ಐಸಿಸ್ ಉಗ್ರನಿಗೆ ಮೊಬೈಲ್ ನೀಡಿದಂತಹ ವೀಡಿಯೋ ಕೂಡ ಬಹಿರಂಗವಾದ ಹಿನ್ನೆಲೆಯಲ್ಲಿ ಸರಕಾರ ಅಲರ್ಟ್ ಆಗಿತ್ತು. ಈ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ನಿರ್ವಹಣೆಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರನ್ನಾಗಿ ಅಂಶು ಕುಮಾರ್ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರವು ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದು, ಕಾರಾಗೃಹಗಳ ಪೊಲೀಸ್ ಅಧೀಕ್ಷಕರಾದ ಅಂಶು ಕುಮಾರ್ (ಕೆಎನ್: 2018) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ. ಕೆ. ಸುರೇಶ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದಿದೆ.
2016 ರ ಐಪಿಎಸ್ (ವೇತನ) ನಿಯಮಗಳ 12 ನೇ ನಿಯಮದ ಅಡಿಯಲ್ಲಿ, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮುಖ್ಯ ಕಾರಾಗೃಹ ಸೂಪರಿಂಟೆಂಡೆಂಟ್ ಹುದ್ದೆಯನ್ನು ಮಂಡ್ಯದ ಪೊಲೀಸ್ ಸೂಪರಿಂಟೆಂಡೆಂಟ್ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿಗಳಲ್ಲಿ ಸಮಾನವೆಂದು ಘೋಷಿಸಲಾಗಿದೆ. ಇದನ್ನು ಸದರಿ ನಿಯಮಗಳ ವೇಳಾಪಟ್ಟಿ II ರಲ್ಲಿ ಸೇರಿಸಲಾಗಿದೆ ಎಂಬುದಾಗಿ ತಿಳಿಸಿದೆ.
ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಲೋಪಗಳ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ ಸೋಮವಾರ ಘೋಷಿಸಿದ್ದಾರೆ. ಅಲ್ಲದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದ ಕಾರಣ ಜೈಲಿನ ಸೂಪರಿಂಟೆಂಡೆಂಟ್ ಹಾಗೂ ಎಎಸ್ಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ತಮ್ಮ ಬ್ಯಾರಕ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಖಾಸಗಿ ಟೆಲಿವಿಷನ್ ಸೆಟ್‌ಗಳಂತಹ ವಿಶೇಷ ಸವಲತ್ತುಗಳನ್ನು ಪಡೆದು ಬಳಸಿಕೊಳ್ಳುತ್ತಿದ್ದಾರೆ. ಕೈದಿಗಳು ಲಿಕ್ಕರ್ ಪಾರ್ಟಿಯನ್ನು ಆಯೋಜಿಸಿರುವುದು, ಬ್ಯಾರಕ್‌ಗಳಲ್ಲಿ ಪಾತ್ರೆಗಳನ್ನು ಬಡಿದುಕೊಂಡು ನೃತ್ಯ ಮಾಡುತ್ತಿರುವುದನ್ನು ಮತ್ತು ಕುರುಕು ತಿಂಡಿಗಳನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ಇವುಗಳನ್ನು ತೋರಿಸುವ ಎರಡು ವೀಡಿಯೊ ತುಣುಕುಗಳು ವೈರಲ್ ಆಗಿದ್ದವು. ಇದರ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತನಿಖೆಗಾಗಿ ರಚಿಸಿದ ಸಮಿತಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಸಂದೀಪ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮತ್ತು ಸಿ.ಬಿ. ರಿಷ್ಯಂತ್ ಸದಸ್ಯರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ನಂತರ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು. ಇದಲ್ಲದೆ, ರಾಜ್ಯದಲ್ಲಿ ಪ್ರಮುಖ ಕಾರಾಗೃಹಗಳು ಇರುವ ಆಯಾ ಜಿಲ್ಲೆಗಳ ಉಪ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಮಿತಿಯ ಸಹ-ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರು ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸೂಪರಿಂಟೆಂಡೆಂಟ್ ಇಮಾಮ್‌ಸಾಬ್ ಮೈಗೇರಿ ಮತ್ತು ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಘೋಷಿಸಿದರು.








