ಬೆಂಗಳೂರು
ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ (ಫ್ಲವರ್ ಶೋ) ಇಂದಿನಿಂದ ಆರಂಭವಾಗುತ್ತಿದ್ದು, ವೀಕ್ಷಣೆಗೆ ಬರುವವರಿಗೆ ಬೆಂಗಳೂರು ಸಂಚಾರ ಪೊಲೀಸರು ವಾಹನ ನಿಲುಗಡೆಗೆ ಸ್ಥಳಗಳನ್ನು ನಿಗದಿಪಡಿಸಿದ್ದಾರೆ. ಫ್ಲವರ್ ಶೋ ವೀಕ್ಷಣೆಗೆ 8 ರಿಂದ 10 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದ್ದು, ಸಂಚಾರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರ ಮಾರ್ಗಸೂಚಿ ಪ್ರಕಾರ, ಸಾರ್ವಜನಿಕರ ದ್ವಿಚಕ್ರ ವಾಹನಗಳ ನಿಲುಗಡೆಗೆ ಡಾ.ಮರಿಗೌಡ ರಸ್ತೆ, ಅಲ್ ಅಮೀನ್ ಕಾಲೇಜ್ ಆವರಣದಲ್ಲಿ ಅವಕಾಶ ನೀಡಲಾಗಿದೆ. ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಬಳಿ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಡಾ.ಮರಿಗೌಡ ರಸ್ತೆ-ಹಾಪ್ ಕಾಮ್ಸ್ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ಕಾರುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಸಂಚಾರ ಪೊಲೀಸರ ಪ್ರಕಟಣೆ ತಿಳಿಸಿದೆ.
ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿ, ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿ, ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರದ ವರೆಗೆ ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12 ನೇ ಕ್ರಾಸ್ ವರೆಗೆ, ಬಿಟಿಎಸ್ ಬಸ್ ಸ್ಟಾಪ್ ಬಿಎಂಟಿಸಿ ಜಂಕ್ಷನ್ ನಿಂದ ಪೋಸ್ಟ್ ಆಫೀಸ್ ರಸ್ತೆಯ ಎರಡೂ ಬದಿ ಹಾಗೂ ಕೃಂಬಿಗಲ್ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.
ಲಾಲ್‌ಬಾಗ್ ವೆಸ್ಟ್‌ಗೇಟ್‌ನಿಂದ ಆರ್.ವಿ. ಟೀಚರ್ಸ್ ಕಾಲೇಜ್‌ವರೆಗೆ, ಆರ್.ವಿ ಟೀಚರ್ಸ್ ಕಾಲೇಜ್‌ನಿಂದ ಅಶೋಕ ಪಿಲ್ಲರ್ ವರೆಗೆ, ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ. ಫಲಪುಷ್ಪ ಪ್ರದರ್ಶನ ಜನವರಿ 16 ರಿಂದ 26ರವರೆಗೆ 11 ದಿನಗಳ ಕಾಲ ನಡೆಯಲಿದ್ದು, ಇಷ್ಟೂ ದಿನಗಳ ವರೆಗೆ ಸಂಚಾರ, ವಾಹನ ನಿಲುಗಡೆ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಈ ಬಾರಿ ಮಹರ್ಷಿ ವಾಲ್ಮೀಕಿ ಜೀವನ ಆಧಾರಿತ ವಿಷಯ ಹಾಗೂ ರಾಮಾಯಣ ಮಹಾಕಾವ್ಯ ವಿಷಯಾಧರಿತ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ.