ಬೆಂಗಳೂರು :
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್. ಕರ್ತವ್ಯಲೋಪ, ಭ್ರಷ್ಟಾಚಾರ, ಇಲಾಖೆ ವಿಚಾರಣೆ ಮತ್ತಿತರ ಕಾರಣಕ್ಕೆ ಅಮಾನತು ಮಾಡಿ ತಿಂಗಳಾನುಗಟ್ಟಲೇ ಮುಂದುವರೆಸಿ ಹಿಂಸೆ ನೀಡುತ್ತಿದ್ದ ಪದ್ಧತಿಗೆ ಸರ್ಕಾರ ಬ್ರೇಕ್ ಹಾಕಿದೆ. ಇನ್ನು ಮೇಲೆ ಯಾವುದೇ ಆರೋಪದಡಿ ಸರ್ಕಾರಿ ನೌಕರ ಅಮಾನತಿಗೆ ಒಳಗಾದರೆ, ಆರೋಪ ಕುರಿತ ಇಲಾಖೆ ವಿಚಾರಣೆ ಆರು ತಿಂಗಳಲ್ಲಿ ಮುಗಿಯಬೇಕು. ಅಮಾನತು ಅವಧಿ ಆರು ತಿಂಗಳ ಮೇಲೆ ಮುಂದುವರೆಸುವಂತಿಲ್ಲ, ಯಾವುದೇ ಆದೇಶ ನೀಡದಿದ್ದ ಪಕ್ಷದಲ್ಲಿ ಅಮಾನತು ತಾನಾಗಿ ರದ್ದಾಗಿದೆ ಎಂದೇ ಪರಿಭಾವಿಸಬೇಕು !
ಹೌದು, ಇಂತದ್ದೊಂದು ಮಹತ್ವದ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮ 1957 ನಿಯಮ10 ಕ್ಕೆ ಕೆಲವು ತಿದ್ದುಪಡಿ ತರಲಾಗಿದೆ. ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಸರ್ಕಾರಿ ನೌಕರರನ್ನು ಅಮಾನತಿನಲ್ಲಿ ಇಡುವುದರಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಬೀಳಲಿದೆ. ಮಾತ್ರವಲ್ಲ, ಸರ್ಕಾರಿ ನೌಕರರಿಗೂ ಕಿರುಕುಳ ನೀಡಲಾಗುತ್ತಿತ್ತು. ಯಾವುದೇ ಒಂದು ಆರೋಪ ಸಂಬಂಧ ಶಿಸ್ತು ಕ್ರಮಕ್ಕೆ ಆದೇಶ ಹೊರಡಿಸಿ ಐದು ವರ್ಷ ಆದರೂ ವಿಚಾರಣೆ ಮುಗಿಯುತ್ತಿರಲಿಲ್ಲ. ಹೀಗಾಗಿ ಸರ್ಕಾರಿ ನೌಕರರು ಅನಾವಶ್ಯಕವಾಗಿ ಅನುಭವಿಸುತ್ತಿದ್ದ ಕಿರುಕುಳದಿಂದ ಮುಕ್ತಿ ಪಡೆದಂತಾಗುತ್ತದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿಯ ಪರಿಷ್ಕೃತ ನಿಯಮಗಳು ಹೀಗಿವೆ. ಅಮಾನತಿಗೆ ಒಳಗಾದ ಆರು ತಿಂಗಳ ಒಳಗೆ ಅಪಾದಿತ ನೌಕರ ವಿರುದ್ಧ ಇಲಾಖೆ ವಿಚಾರಣೆ ಆರಂಭಿಸದಿದ್ದಲ್ಲಿ ಅಥವಾ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದಿದ್ದಲ್ಲಿ ಅಂತಹ ನೌಕರನ ಅಮಾನತು ಅವಧಿ 6 ತಿಂಗಳು ಮುಗಿದ ನಂತರ ರದ್ದಾಗುತ್ತದೆ.
ಅಮಾನತು ಅವಧಿ ಮುಂದುವರೆಸಬೇಕಿದ್ದಲ್ಲಿ ಸಕ್ಷಮ ಪ್ರಾಧಿಕಾರಿ ಆರು ತಿಂಗಳ ಒಳಗೆ ಅದೇಶಿಸದಿದ್ಧಲ್ಲಿ ಭಾವಿತ ಆದೇಶ ಎಂದು ಪರಿಗಣಿಸಿ ಆರು ತಿಂಗಳ ಮುಗಿದ ಮರು ದಿನವೇ ಅಮಾನತು ಆದೇಶ ರದ್ದಾಗುತ್ತದೆ. ಈ ರೀತಿ ಅಮಾನತು ಆದೇಶ ರದ್ದಾದ ಬಳಿಕ ಸರ್ಕಾರಿ ನೌಕರ ನೇಮಕಾತಿ ಪ್ರಾಧಿಕಾರದಿಂದ ಸ್ಥಳ ನಿಯುಕ್ತಿ ಆದೇಶವನ್ನು ಕೋರಬೇಕು. ಸ್ಥಳ ನಿಯುಕ್ತಿ ಕೋರದೇ ಹೋದರೆ, ಅಮಾನತು ಅವಧಿ ಹೊರತು ಪಡಿಸಿ ಉಳಿದ ಅವಧಿಯನ್ನು ಗೈರು ಹಾಜರಿ ಎಂದುಪರಿಗಣಿಸಲಾಗುತ್ತದೆ.
ಭ್ರಷ್ಟಾಚಾರ, ಲೋಕಾಯುಕ್ತ ಸಂಸ್ಥೆ ದಾಖಲಿಸುವ ಪ್ರಕರಣದಲ್ಲಿ ಅಮಾನತು ಆದರೂ, ಸಂಬಂಧಪಟ್ಟ ತನಿಖಾ ಸಂಸ್ಥೆ ಆರು ತಿಂಗಳ ಒಳಗೆ ಸರ್ಕಾರಿ ನೌಕರನ ಅಮಾನತು ಅವಧಿ ಮುಂದುವರೆಸುವ ಬಗ್ಗೆ ಕೋರಿಕೆ ಸಲ್ಲಿಸಬೇಕು. ಸಲ್ಲಿಸಿದರೆ ಮಾತ್ರ ಅಮಾನತು ಅವಧಿ ವಿಸ್ತರಿಸಲಾಗುತ್ತದೆ. ಸಲ್ಲಿಸದಿದ್ದ ಪಕ್ಷದಲ್ಲಿ ಆರು ತಿಂಗಳ ನಂತರ ಸ್ವಯಂ ಚಾಲಿತವಾಗಿ ಅಮಾನತು ರದ್ದಾಗುತ್ತದೆ. ಸಂದರ್ಭ ಅನುಸಾರ ಆರು ತಿಂಗಳ ಒಳಗೆ ಇಲಾಖೆ ವಿಚಾರಣೆ ಆರಂಭಿಸಿದ್ದಲ್ಲಿ, ದೋಷಾರೋಪಣೆ ಸಲ್ಲಿಸಿದ್ದಲ್ಲಿ ಅಂತಹ ಸಂದರ್ಭದಲ್ಲಿ ಆರು ತಿಂಗಳ ಒಳಗೆ ಸರ್ಕಾರಿ ನೌಕರನನ್ನು ಸೇವೆಗೆ ಪುನರ್ ಅವಕಾಶ ಕೊಡಲು ಸಕ್ಷಮ ಪ್ರಾಧಿಕಾರ ನಿರ್ಧರಿಸುತ್ತದೆ.
ಯಾವ ಹುದ್ದೆಯಿಂದ ಸರ್ಕಾರಿ ನೌಕರ ಅಮಾನತು ಆಗಿರುತ್ತಾರೋ, ಅಮಾನತು ಅವಧಿ ಮುಗಿದ ಬಳಿಕ ಅದೇ ಹುದ್ದೆಗೆ ನಿಯೋಜಿಸುವಂತಿಲ್ಲ. ಈ ನಿಯಮಗಳನ್ನು ಸಕ್ಷಮ ಪ್ರಾಧಿಕಾರಿಗಳು ಮತ್ತು ಶಿಸ್ತು ಪ್ರಾಧಿಕಾರಿಗಳು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಈ ಕುರಿತ ಸುತ್ತೋಲೆ ಎಲ್ಲಾ ಇಲಾಖೆಗಳಿಗೆ ಕಳುಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ