ಬೆಂಗಳೂರು
ಹಾಸನನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್, ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ಕಾರಣ ಬೆಂಗಳೂರು ಮಂಗಳೂರು ಮಧ್ಯೆ ಸಂಚರಿಸುವ ಎಲ್ಲ ರೈಲುಗಳ ಸಂಚಾರ ರದ್ದಾಗಿದೆ. ಕೆಲವು ರೈಲುಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಲಾಗುತ್ತಿದೆ. ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಅಂತಿಮ ಹಂತ ತಲುಪಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಇದರಿಂದಾಗಿ ಶೀಘ್ರವೇ ರೈಲು ಸಂಚಾರ ಪುನಾರರಂಭಗೊಳ್ಳುವ ನಿರೀಕ್ಷೆ ಇದೆ.
ದುರಸ್ತಿ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಸದ್ಯ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದೆ. ಭೂಕುಸಿತ ಸಂಭವಿಸಿದ ಸ್ಥಳದ ಕೆಳಗೆ ಬಂಡೆ ಮತ್ತು ಮರಳಿನ ಚೀಲಗಳಿಂದ ತಡೆಗೋಡೆ ನಿರ್ಮಿಸಿ ಕಬ್ಬಿಣದ ಬಲೆಯಿಂದ ಭದ್ರಪಡಿಸಲಾಗಿದೆ. ಹಳಿಯನ್ನು ಬಲಪಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರೈಲ್ವೆ ಹಳಿಗಳಿಗೆ ಹೊಂದಿಕೊಂಡಂತೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾರ್ಯ ಈಗಷ್ಟೇ ಆರಂಭವಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಪ್ರಸ್ತುತ ಆಗಸ್ಟ್ 6 ರವರೆಗೆ ಈ ಮಾರ್ಗದಲ್ಲಿ ರೈಲುಗಳ ಸಂಚಾರ ರದ್ದಾಗಿದೆ. ಜುಲೈ 26 ರಂದು ಭೂಕುಸಿತ ಸಂಭವಿಸಿತ್ತು. ಅಂದಿನಿಂದ, ಕಾರ್ಮಿಕರು ಮತ್ತು ಗ್ಯಾಂಗ್‌ಮೆನ್ ಸ್ಥಳದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಸುಮಾರು 600-700 ಮಂದಿ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದಾರೆ.
ದಿನಗಟ್ಟಲೆ ಸುರಿದ ನಿರಂತರ ಮಳೆಯಿಂದಾಗಿ ಎಡಕುಮೇರಿ ಕಡಗರವಳ್ಳಿ ಮಧ್ಯೆ ಭೂಕುಸಿತ ಸಂಭವಿಸಿ ರೈಲು ಹಳಿಗಳ ಮೇಲೆ ಮಣ್ಣು ಬಿದ್ದ ಪರಿಣಾಮ ಜುಲೈ 26ರಿಂದ ಸುಮಾರು 14 ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು. ಹಳಿಯ ಕೆಳಭಾಗದಲ್ಲಿ ಮಣ್ಣು ಭಾರಿ ಆಳಕ್ಕೆ ಕುಸಿದಿದ್ದರಿಂದ ಹಳಿಗೆ ಕೂಡ ಅಪಾಯ ಎದುರಾಗಿದೆ. ಜಡಿಮಳೆಯ ಕಾರಣ ದುರಸ್ತಿ ಕಾರ್ಯವೂ ವಿಳಂಬವಾಗುತ್ತಿದೆ. ಆಗಸ್ಟ್ 10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅನುಮಾನ ಎಂದು ಈ ಹಿಂದೆ ನೈಋತ್ಯ ರೈಲ್ವೆ ತಿಳಿಸಿತ್ತು.