ನವದೆಹಲಿ:
ನಾಡಹಬ್ಬ ಮೈಸೂರು ದಸರಾ ಅನ್ನು ಉದ್ಘಾಟಿಸಲು ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ ವಜಾ ಆಗಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್‌ನಲ್ಲೂ ಅರ್ಜಿದಾರರಿಗೆ ಸೋಲಾಗಿದ್ದು, ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಗೆ ಹೋಗಿದ್ದರು.
ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೈಕೋರ್ಟ್ಗೆ ಅರ್ಜಿ ಹಾಕಿದ್ದರು. ಹೈಕೋರ್ಟ್ ಈ ಅರ್ಜಿ ವಜಾ ಮಾಡಿತ್ತು, ನಂತರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ನಡೆದ ವಿಚಾರಣೆಯಲ್ಲಿ ಅರ್ಜಿ ವಜಾಗೊಳಿಸಲಾಗಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಸಂಕ್ಷಿಪ್ತ ವಿಚಾರಣೆಯ ನಂತರ ಈ ತೀರ್ಪು ನೀಡಿದೆ. ಹೀಗಾಗಿ ಸೆಪ್ಟೆಂಬರ್ 22ರಂದು ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ನಡೆಯುವುದು ದೃಢವಾಗಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಪಿ.ಬಿ. ಸುರೇಶ್ ಅವರು, ಹಿಂದೂಯೇತರ ವ್ಯಕ್ತಿಗೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಅವಕಾಶ ನೀಡುವುದು ಧಾರ್ಮಿಕ ಆಚರಣೆಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. “ಇದು ಸಂಪೂರ್ಣವಾಗಿ ರಾಜಕೀಯ. ಧಾರ್ಮಿಕ ಚಟುವಟಿಕೆಗಾಗಿ ಅವರನ್ನು ದೇವಸ್ಥಾನಕ್ಕೆ ಕರೆತರಲು ಯಾವುದೇ ಕಾರಣವಿಲ್ಲ” ಎಂದು ಅವರು ಹೇಳಿದರು. ಆಹ್ವಾನಿತರು ಹಿಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಆಕ್ಷೇಪಿಸಿದರು.
ಆದರೆ ನ್ಯಾಯಮೂರ್ತಿ ನಾಥ್ ಅವರು ʼಅರ್ಜಿ ವಜಾಗೊಳಿಸಲಾಗಿದೆʼ ಎಂದು ಘೋಷಿಸಿದರು. ʼಅನ್ ಧರ್ಮದ ವ್ಯಕ್ತಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡುವುದರಿಂದ ಅರ್ಜಿದಾರರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನಮಗೆ ಮನವರಿಕೆಯಾಗಿಲ್ಲʼ ಎಂದು ಪೀಠ ತಿಳಿಸಿತು. ನಿನ್ನೆಯೇ ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ಪಟ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಚೀಫ್ ಜಸ್ಟಿಸ್ ಬಿ.ಆರ್. ಗವಾಯ್ ಅವರು ಅದನ್ನು ಇಂದು ವಿಚಾರಣೆಗೆ ತಂದಿದ್ದರು. ಸಂಕ್ಷಿಪ್ತ ವಾದಗಳ ನಂತರ ಅರ್ಜಿಯನ್ನು ವಜಾ ಮಾಡಲಾಯಿತು.
ಸೆಪ್ಟೆಂಬರ್ 15ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭೂ ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ಪೀಠವು ಮೂರು ಅರ್ಜಿಗಳನ್ನು ವಜಾ ಮಾಡಿತ್ತು. ಹೈಕೋರ್ಟ್ ತೀರ್ಪಿನಲ್ಲಿ, “ಒಂದು ನಿರ್ದಿಷ್ಟ ಧರ್ಮ ಅಥವಾ ನಂಬಿಕೆಯವರು ಇತರ ಧರ್ಮದ ಹಬ್ಬಗಳಲ್ಲಿ ಭಾಗವಹಿಸುವುದರಿಂದ ಸಂವಿಧಾನದಡಿ ಲಭ್ಯವಿರುವ ಹಕ್ಕುಗಳು ಉಲ್ಲಂಘನೆಯಾಗುವುದಿಲ್ಲ” ಎಂದು ಹೇಳಿತ್ತು. ಆಹ್ವಾನವು ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವುದಿಲ್ಲ. ಯಾವುದೇ ಧಾರ್ಮಿಕ ಪಂಗಡದ ಹಕ್ಕುಗಳು ಮೊಟಕುಗೊಳ್ಳುವುದಿಲ್ಲ ಎಂದು ಹೈಕೋರ್ಟ್ ದೃಢಪಡಿಸಿತ್ತು.
ಬಾನು ಮುಷ್ತಾಕ್ ಅವರ ಆಹ್ವಾನ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುವುದಿಲ್ಲ. ಅವರು ನಿಪುಣ ಲೇಖಕಿ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಎಂದು ಪೀಠ ಶ್ಲಾಘಿಸಿತು. ಅರ್ಜಿದಾರರು, ಪವಿತ್ರ ದೀಪ ಬೆಳಗಿಸುವುದು, ದೇವರಿಗೆ ಹಣ್ಣು-ಹೂವು ಅರ್ಪಿಸುವುದು, ವೈದಿಕ ಮಂತ್ರಗಳು ಸೇರಿದಂತೆ ಹಿಂದೂ ಆಚರಣೆಗಳನ್ನು ಹಿಂದೂಗಳೇ ಮಾಡಬೇಕು ಎಂದು ವಾದಿಸಿದ್ದರು.
ದಸರಾ ಉತ್ಸವವು ರಾಜ್ಯ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಯಾವುದೇ ದೇವಾಲಯ ಅಥವಾ ಧಾರ್ಮಿಕ ಸಂಸ್ಥೆಯದಲ್ಲ. ಧರ್ಮ ಆಧಾರದ ಮೇಲೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಹಿಂದೆ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಲೇಖಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಆಹ್ವಾನಿಸಲಾಗಿದೆ. ವಿವಿಧ ಪಕ್ಷಗಳ ಪ್ರತಿನಿಧಿಗಳು ಸೇರಿದ ಸಮಿತಿಯೇ ಬಾನು ಅವರನ್ನು ಆಯ್ಕೆಮಾಡಿದೆ ಎಂದು ರಾಜ್ಯ ಸರ್ಕಾರ ವಾದ ಮಂಡಿಸಿತ್ತು.