ವಾಷಿಂಗ್ಟನ್:
ಜಗತ್ತಿನ 213ಕ್ಕೂ ಹೆಚ್ಚು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಯುವಕರೂ ಕೂಡ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೋವಿಡ್-19 ಜಾಗತಿಕ ನಿರ್ವಹಣೆ ಕುರಿತಂತೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಅವರು, ‘ವಿಶ್ವದಾದ್ಯಂತ ಯುವ ಜನರೂ ಸಹ ಮಾರಣಾಂತಿಕ ಕೊರೋನಾ ವೈರಸ್‌ಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಭವಿಷ್ಯದಲ್ಲೂ ಯುವಕರು ಈ ಸೋಂಕಿಗೆ ಬಲಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
‘ಪ್ರಸ್ತುತ ವಿಶ್ವದಾದ್ಯಂತ 17.3 ಮಿಲಿಯನ್ ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಅನೇಕ ದೇಶಗಳಲ್ಲಿ ಯುವಕರಿಗೂ ಸೋಂಕು ತಗುಲಿರುವುದು ಮತ್ತು ಯುವಕರ ಮೃತ್ಯುವಿಗೆ ಕೊರೋನಾ ಕಾರಣವಾಗುತ್ತಿದೆ. ಹೀಗಾಗಿ ಯುವಕರೂ ಸಹ ಎಲ್ಲರಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಿ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ. ನಾವು ಈ ಹಿಂದೆ ಅನುಸರಿಸುತ್ತಿದ್ದ ನಮ್ಮ ಕಾರ್ಯ ವಿಧಾನವನ್ನು ಬದಲಿಸಿಕೊಳ್ಳಬೇಕಿದೆ. ಕೊರೋನಾ ವೈರಸ್ ಬಂದಾಕ್ಷಣ ಜೀವನ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ನಾವು ವೈರಸ್ ನೊಂದಿಗೆ ಸೆಣಸಿ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಅಧಾನೊಮ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೊರೋನಾವನ್ನು ಸೋಲಿಸಲು ಸಾಮೂದಾಯಿಕ ರೋಗ ನಿರೋಧಕ ಶಕ್ತಿಯಿಂದ ಮಾತ್ರ ಸಾಧ್ಯ. ಹೆಚ್ಚು ಯುವಕರಿಗೆ ಸೋಂಕು ತಗುಲಬೇಕು, ಯುವಕರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಮಾತ್ರ ಕೊರೋನಾವನ್ನು ಓಡಿಸಲು ಸಾಧ್ಯ ಎನ್ನಲಾಗಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಹೊರಹಾಕಿರುವ ಮಾಹಿತಿ ಆಘಾತಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ ಕೋವಿಡ್-19 ಜಾಗತಿಕ ತುರ್ತುಸ್ಥಿತಿ ಘೋಷಿಸಿ 6 ತಿಂಗಳಾಗಿದೆ. ಈ ನಡುವೆ 17.3 ಮಿಲಿಯನ್ ಜನ ಈ ಸೋಕಿಗೆ ತುತ್ತಾಗಿದ್ದು, ಎಲ್ಲಾ ದೇಶಗಳು ಕೋವಿಡ್ ಲಸಿಕೆ ಪ್ರಯೋಗಕ್ಕೆ ಮುಂದಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
