ಕುಡಿಯಲು ಮಾತ್ರ ಮದಲೂರು ಕೆರೆಗೆ ನೀರು

 ಬರಗೂರು :

     ಮದಲೂರು ಕೆರೆಗೆ ನೀರು ಹರಿಸುವುದು ನೀರಾವರಿಗಲ್ಲ ಕುಡಿಯುವ ನೀರಿನ ಯೋಜನೆಗೆ ಮಾತ್ರ ಎಂಬುದು ಮಾಜಿ ಸಚಿವರಿಗೂ ಗೊತ್ತಿದೆ. ಈ ಬಾರಿ ಉತ್ತಮ ಮಳೆಯಾದ್ದರಿಂದ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗಳು ತುಂಬುವ ಹಂತಕ್ಕೆ ಬಂದಿದ್ದು ನಾವು ಕೊಡಬೇಕಿರುವ 0.9 ಟಿ.ಎಂ.ಸಿ ನೀರು ಉಳಿಕೆ ಇದೆ. ಕೆಲವೇ ದಿನಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುತ್ತೇನೆ ಎಂದು ಕಾನೂನು, ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಬರಗೂರು ರಂಗಾಪುರ ಗ್ರಾಮದಲ್ಲಿ ಗಡಿನಾಡು ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಲಿ. ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೋಲಾರ್ ಶೀಥಲೀಕರಣ ಘಟಕ ಉದ್ಘಾಟನೆ, ಕಟ್ಟಡ ಶಂಕುಸ್ಥಾಪನೆ, ಭೂಮಿ ಪೂಜೆ ಹಾಗೂ 2020-21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿದರು.

ಶಿರಾ ತಾಲೂಕಿಗೆ 0.89 ಟಿ.ಎಂ.ಸಿ ನೀರು ಇದೆ. ಆಗಿನ ಮಂತ್ರಿಗಳು ಪಂಚಾಯತ್ ರಾಜ್ ಇಲಾಖೆಯಿಂದ ಒಂದು ನಾಲೆ ಮಾಡಿ ನೀರು ಕೊಡಿ ಎಂದು ಬರೆಸಿ ಸರ್ಕಾರವನ್ನು ಕೇಳಿದ್ದರು ನೀರು ಕೊಡಲಿಲ್ಲ ಕಾರಣ ಕುಣಿಗಲ್ ತಾಲೂಕಿನವರು ಒಂದು ವಲಯದಿಂದ ಇನ್ನೊಂದು ವಲಯಕ್ಕೆ ನೀರು ಕೊಡುವುದಿಲ್ಲ ಎಂದು ಕೋರ್ಟ್‍ನಲ್ಲಿ ಕೇಸು ಹಾಕಿದಾಗ ಹೈಕೋರ್ಟ್ ತೀರ್ಪು ನೀಡಿ ಅದರಲ್ಲೇ ಮದಲೂರು ಕೆರೆಗೆ 0.9ಟಿ.ಎಂ.ಸಿ ನೀರು ಕೊಡಬಹುದೆಂದು ತೀರ್ಪ ನೀಡಿತ್ತು. ಆದರೆ ಈ ಮದ್ಯೆ 12-13 ಪಿಕಪ್ ಕಟ್ಟಿದ್ದರಿಂದ ಶಿರಾ ಕೆರೆ ತುಂಬಲು ಸಾಧ್ಯವಾಗಲಿಲ್ಲ.

     ಈ ಕಂಪನಿಯನ್ನು ಹುಟ್ಟು ಹಾಕಿ ಕೇವಲ ಬೆರಳೆಣಿಕೆಯಷ್ಟು ಮಂದಿಯನ್ನು ಸೇರಿಸಿಕೊಂಡು ನಡೆಸಿದರೆ ಸಾಲದು. ವಿಶೇಷವಾಗಿ ಬಡವರನ್ನು ಸದಸ್ಯರನ್ನಾಗಿ ಮಾಡಿಕೊಂಡು ಸರ್ಕಾರ ಕೊಡುವ ಸೌಲತ್ತುಗಳನ್ನು ಬಡವರಿಗೇ ಸಿಗುವಂತಹ ಕೆಲಸ ಮಾಡಿದರೆ ನಮ್ಮ, ನಿಮ್ಮೆಲ್ಲರಿಗೂ ಗೌರವ ಬರುತ್ತದೆ. ಇಂದು ಉದ್ಘಾಟಿಸುತ್ತಿರುವ ಶೀಥಲ ಕೇಂದ್ರವನ್ನು ಸಾಂಕೇತಿಕವಾಗಿ ಚಾಲನೆಗೆ ತಂದಿದ್ದು, ಇದರಿಂದ ಅಗಾಧವಾದ ಬದಲಾವಣೆಯಾಗುತ್ತದೆ ಎಂದು ಭಾವಿಸಿಲ್ಲ. ಕೇವಲ ಪ್ರಾರಂಭ ಮಾಡುತ್ತಿದ್ದೇವೆ ಅಷ್ಟೆ. ನೀವುಗಳು ಇದನ್ನು ಬಳಸಿಕೊಂಡು ರೈತರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಯಶಸ್ಸು ಕಂಡಾಗ ಈ ಯೋಜನೆಗೆ ಮೆರುಗು ಸಿಗುತ್ತದೆ.

     ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ ಈ ಕಂಪನಿ ಭಾರತ ಸರ್ಕಾರ ರೈತರ ಜೊತೆ ರೈತರು ಬೆಳೆದಂತಹ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು ಎಂಬ ನಿಟ್ಟಿನಲ್ಲಿ ನಬಾರ್ಡ್ ಮೂಲಕ ರೈತರಿಗೆ ಪ್ರೋತ್ಸಾಹ ಮಾಡಿ ಫಾರಮರ್ ಪ್ರೆಡ್ಯೂಸ್ ಆರ್ಗನೈಸೇಷನ್ ಎಂಬ ಸಂಸ್ಥೆ ಯೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳು ಉತ್ತಮ ಮಾಹಿತಿಗಳನ್ನು ಕೊಡುತ್ತಿದ್ದಾರೆ. ಆದರೂ ಸಹ ರೈತರು ಬೆಳೆದ ಬೆಳೆ ಮಾರಾಟವಾಗದೆ ಉಳಿಕೆಯಾದ ಸಂದರ್ಭದಲ್ಲಿ ಇಂದು ಉದ್ಘಾಟಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಇಂತಹ ಶೀಥಲೀಕರಣ ಘಟಕ ರೈತರಿಗೆ ವರದಾನವಾಗಿದೆ. ಇಂತಹ ಸೌಲಭ್ಯಗಳು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಿರ್ಮಾಣವಾದರೆ ತುಂಬಾ ಸಹಾಯಕವಾಗುತ್ತದೆ. ನೀರಾವರಿ ವಿಚಾರದಲ್ಲಿ ಹೇಮಾವತಿ ನೀರು ಜಿಲ್ಲೆಯಲ್ಲಿ ಶಿರಾ ತಾಲ್ಲೂಕಿಗೆ ಹರಿಸಲಾಗಿತ್ತು. ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗಳು ತುಂಬಿ ಕೋಡಿ ಬೀಳುವ ಹಂತಕ್ಕೆ ತಲುಪಿವೆ. ತಾಲ್ಲೂಕು ಬರಪೀಡಿತ ಪ್ರದೇಶವಾಗಿದ್ದು ಕುಡಿಯುವ ನೀರಿಗೆ ಆಹಾಕಾರವಿದೆ. ಮದಲೂರು ಕೆರೆಗೆ ನೀರು ಹರಿಸಿದಲ್ಲಿ ಈ ಭಾಗದ ಜನರ ಕುಡಿಯುವ ನೀರಿನ ಜೊತೆಗೆ ರೈತರ ಬೋರ್ ವೆಲ್‍ಗಳ ಅಂತರ್ಜಲ ವೃದ್ದಿಯಾಗಲಿದ್ದು ಸಚಿವರು ದಯಮಾಡಿ ಈ ಬಾರಿ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಿದರು.

      ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಶಿರಾ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಈ ಭಾಗದಲ್ಲಿ ಗಡಿನಾಡ ತೋಟಗಾರಿಕೆ ಕಂಪನಿ ಕಾರ್ಯರೂಪಕ್ಕೆ ಬಂದಿದ್ದು, ಈ ಸಂಸ್ಥೆಗೆ ಸುಮಾರು 1500 ಮಂದಿ ರೈತರು ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಸದಸ್ಯರನ್ನೊಳಗೊಂಡು ಉತ್ತಮ ರೀತಿಯಲ್ಲಿ ಸಂಘವನ್ನು ಬಲಪಡಿಸಬೇಕಿದೆ. ತಾಲ್ಲೂಕಿನ ಬಹುತೇಕ ರೈತರು ಶೇಂಗಾ ಬೆಳೆಯನ್ನೇ ಆಧರಿಸಿ ರೈತರು ವ್ಯವಸಾಯ ಮಾಡಿದ್ದು ಈ ಬಾರಿ ಕಾಲಕ್ಕೆ ಸರಿಯಾಗಿ ಬೆಳೆಯಾಗದೆ ಶೇಂಗಾ ಬೆಳೆಗೆ ಬೆಂಕಿ ಸೀಡೆ ರೋಗ ಬಂದು ನೆಲಕಚ್ಚಿದೆ. ರೈತರಿಂದ ಇನ್ಶೂರೆನ್ಸ್ ಕಟ್ಟಿಸಿಕೊಂಡಿರುವ ಕಂಪನಿಗಳು ಹಾಗೂ ಸರ್ಕಾರದ ವತಿಯಿಂದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಪರಿಹಾರ ನೀಡಿದರೆ ತುಂಬಾ ಅನುಕೂಲವಾಗುತ್ತದೆಂದು ಸಚಿವರಲ್ಲಿ ಚಿದಾನಂದ್ ಎಂ.ಗೌಡ ಮನವಿ ಮಾಡಿದರು. ಗಡಿನಾಡ ತೋಟಗಾರಿಕೆ ಕಂಪನಿಯ ಆವರಣದಲ್ಲಿ ನನ್ನ ಸ್ವಂತ ಖರ್ಚಿನಲ್ಲಿ ಒಂದು ಬೋರ್‍ವೆಲ್ ಹಾಕಿಸಿ ಕೊಡಲು ತೀರ್ಮಾನಿಸಿದ್ದು , ಒಂದು ವಾರದಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದರು.

ನಾರು, ತೆಂಗು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ,ಮಂಜುನಾಥ್, ತಾಲ್ಲೂಕು ದಂಡಾಧಿಕಾರಿ ಮಮತ, ಉಪತಹಸೀಲ್ದಾರ್ ಚಂದ್ರಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯರಾಮಯ್ಯ, ಸೆಲ್ಕೋ ಫೌಂಡೇಷನ್ ಪ್ರೋಗ್ರಾಂ ಕೋ ಆರ್ಡಿನೇಟರ್ ಶಿವಕುಮಾರ್, ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂ ಕೃಷಿ ವಿಜ್ಞಾನಿ ಡಾ.ಓಂಕಾರಪ್ಪ, ಬರಗೂರು ಗಡಿನಾಡ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಚಂದ್ರಶೇಖರಗೌಡ, ವಿಎಸ್.ಎಸ್.ಎನ್ ನಿರ್ದೇಶಕರಾದ ಕೃಷ್ಣೇಗೌಡ, ಪರಮೇಶ್‍ಗೌಡ, ಬರಗೂರು ರೈತ ಉತ್ಪಾದಕರ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಎಸ್.ಡಿ.ಶಿವಣ್ಣ, ಆಡಿಟರ್ ರಾಜಣ್ಣ, ದಾಖಲೆ ನಿರ್ವಹಣಾಧಿಕಾರಿ ಸೌಭಾಗ್ಯ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Recent Articles

spot_img

Related Stories

Share via
Copy link