ಬೆಂಗಳೂರು
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ(ಜ.17) ಜ.19ರ ವರೆಗೆ ಬಾಸ್ಕೆಟ್‍ಬಾಲ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ 4ನೇ ಸೀನಿಯರ್ 3×3 ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್ ಪಂದ್ಯಾವಳಿ ನಡೆಯಲಿದೆ ಎಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‍ಗಳ ಅಧ್ಯಕ್ಷ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ತಿಳಿಸಿದ್ದಾರೆ.
ಕರ್ನಾಟಕ ಒಲಿಂಪಿಕ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಭಾರತದ ಎಲ್ಲೆಡೆಯಿಂದ 56 (30 ಪುರುಷರ ಮತ್ತು 26 ಮಹಿಳೆಯರ) ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇವುಗಳಲ್ಲಿ ಪುರುಷರ ಮತ್ತು ಮಹಿಳೆಯರ ರೈಲ್ವೇಸ್ ತಂಡಗಳು, ಪುರುಷರ ವಿಭಾಗದಲ್ಲಿ ಸರ್ವೀಸಸ್ ತಂಡ ಸೇರಿವೆ ಎಂದರು.ವಿವಿಧ ರಾಜ್ಯಗಳ 250 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿವೆ.
ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಚಾಂಪಿಯನ್ ಶಿಪ್‍ಗಳಲ್ಲಿ ಬೆಂಗಳೂರು ಗಮನಾರ್ಹ ಪಾತ್ರ ವಹಿಸುತ್ತದೆ. ಕ್ರೀಡಾ ತಾಣವಾಗಿ ಬೆಂಗಳೂರಿನ ಖ್ಯಾತಿ, ಗೌರವಗಳು ಹೆಚ್ಚುತ್ತಿರುವುದು ಕೂಡ ಅಂತಾರಾಷ್ಟ್ರೀಯ ಆಟಗಾರರು ಮತ್ತು ತಂಡಗಳನ್ನು ಆಕರ್ಷಿಸುತ್ತದೆಯಲ್ಲದೇ ಇದರೊಂದಿಗೆ ಭಾರತದಲ್ಲಿ ಬಾಸ್ಕೆಟ್‍ಬಾಲ್‍ನ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಡಾ.ಕೆ.ಗೋವಿಂದರಾಜ್ ಹೇಳಿದರು.
ಈ ಚಾಂಪಿಯನ್‍ಶಿಪ್‍ಗಳನ್ನು ನಿರಂತರವಾಗಿ ಆಯೋಜಿಸುವುದು ಮತ್ತು ಬೆಂಬಲಿಸುವುದರಿಂದ, ನಾವು ಕೇವಲ ಬಾಸ್ಕೆಟ್‍ಬಾಲ್‍ಗೆ ಪ್ರೋತ್ಸಾಹ ನೀಡುವುದು ಮಾತ್ರವಲ್ಲದೇ, ಕ್ರೀಡಾಪಟುಗಳನ್ನು ಪೋಷಿಸುತ್ತೇವೆ. ಜೊತೆಗೆ ಭಾರತದಲ್ಲಿ ಬಾಸ್ಕೆಟ್‍ಬಾಲ್ ಪರಿಸರ ವ್ಯವಸ್ಥೆಯನ್ನು ದೃಢಪಡಿಸುತ್ತೇವೆ ಎಂದು ಡಾ.ಕೆ.ಗೋವಿಂದರಾಜ್ ತಿಳಿಸಿದರು.