ಬೆಂಗಳೂರು :
ಗೋಲ್ಡ್ ಸುರೇಶ್ ಅವರು ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾಗಿ ಬಿಗ್ ಬಾಸ್ನಲ್ಲಿ ಪ್ರದರ್ಶನ ನೀಡುತ್ತಾ ಇದ್ದಾರೆ. ಅವರ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದಕ್ಕೆ ಕಾರಣ ಅವರ ವರ್ತನೆ. ಅವರು ಸುಳ್ಳು ಹೇಳುತ್ತಾರೆ, ಮಾಡಿದ ತಪ್ಪನ್ನು ಒಪ್ಪಿಕೊಳ್ಳಲ್ಲ ಎಂಬುದು ಕೆಲವರ ಆರೋಪ. ಹೀಗಿರುವಾಗಲೇ ಬಿಗ್ ಬಾಸ್ ಮನೆಯಲ್ಲಿ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ. ಅವರು ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಬಿಗ್ ಬಾಸ್ನಲ್ಲಿ ಟಾಸ್ಕ್ಗಳನ್ನು ಆಡುವಾಗ ಹೆಚ್ಚು ಎಚ್ಚರಿಕೆ ಬೇಕು. ಸ್ವಲ್ಪ ಯಾಮಾರಿದರೂ ತೊಂದರೆ ಕಟ್ಟಿಟ್ಟ ಬುತ್ತಿ. ಈಗ ಬಿಗ್ ಬಾಸ್ನಲ್ಲಿ ಅವಘಡ ಒಂದು ಸಂಭವಿಸಿದೆ. ಬಿಗ್ ಬಾಸ್ನಲ್ಲಿ ನಾಲ್ಕು ತಂಡಗಳನ್ನಾಗಿ ಮಾಡಲಾಗಿತ್ತು. ಪ್ರತಿ ತಂಡಕ್ಕೆ ಒಂದು ಡ್ರಮ್ ನೀಡಲಾಗಿತ್ತು. ಅದರಲ್ಲಿ ನೀರು ಇರುತ್ತದೆ. ಈ ನೀರು ಹೊರ ಹೋಗದಂತೆ ನೋಡಿಕೊಳ್ಳಬೇಕು.
ಸುರೇಶ್ ಅವರು ಊಹಿಸದ ರೀತಿಯಲ್ಲಿ ಆ ಡ್ರಮ್ ಅವರ ಕಾಲ ಮೇಲೆ ಬಿದ್ದಿದೆ. ತಕ್ಷಣವೇ ಅವರು ನೆಲದಮೇಲೆ ಬಿದ್ದು ಹೊರಳಾಡಿದ್ದಾರೆ. ಅಷ್ಟೇ ಅಲ್ಲ, ‘ನನ್ನ ಕಾಲು ಮುರಿದೇ ಹೋಯ್ತು’ ಎಂದು ಅವರು ಗೋಳಾಡಿದ್ದಾರೆ. ಇದನ್ನು ನೋಡಿ ಮನೆ ಮಂದಿಗೆ ಶಾಕ್ ಆಗಿದೆ. ಕಾಲೇ ಮುರಿದು ಹೋದರೆ ಅವರು ಬಿಗ್ ಬಾಸ್ನಿಂದ ಹೊರ ಹೋಗಬೇಕಾಗುತ್ತದೆಯಲ್ಲ ಎನ್ನುವ ಆತಂಕ ಅನೇಕರಿಗೆ ಉಂಟಾಯಿತು.
ಆ ಬಳಿಕ ಕೆಲವರು ಸುರೇಶ್ ಅವರ ಕಾಲನ್ನು ನೇರ ಮಾಡಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಸುರೇಶ್ ಅವಕಾಶ ಕೊಡಲಿಲ್ಲ. ಅವರ ನೋವು ಮತ್ತಷ್ಟು ಹೆಚ್ಚಾಗಿ ನರಳುವಿಕೆಯೂ ಹೆಚ್ಚಾಯಿತು. ನಂತರ ಅವರನ್ನು ಕನ್ಫೆಷನ್ ರೂಂಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಸುರೇಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.
ಸುರೇಶ್ ಕಾಲು ಮುರಿದಿದೆ ಎನ್ನುವ ಭಯದಲ್ಲಿ ಇದ್ದ ಇತರ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ‘ಸುರೇಶ್ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಬಿಗ್ ಬಾಸ್ ಕಡೆಯಿಂದ ಮಾಹಿತಿ ಸಿಕ್ಕಿದೆ. ಈ ವಿಚಾರ ಕೇಳಿ ಮನೆ ಮಂದಿ ಖುಷಿಪಟ್ಟಿದ್ದಾರೆ.