ಬೆಂಗಳೂರು:
ನಟ ದರ್ಶನ್ ಮತ್ತು ಗ್ಯಾಂಗ್ ಸೇರಿಕೊಂಡು ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನ ಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯು ಚುರುಕುಗೊಂಡಿದ್ದು, ಈ ನಡುವಲ್ಲೇ ಹತ್ಯೆಯಾದ ಸ್ಥಳವಾದ ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.
ಆರ್.ಆರ್.ನಗರದ ಪಟ್ಟಣಗೆರೆ ಮುಖ್ಯ ರಸ್ತೆಯ ಹೆಮ್ಮಿಗೆಪುರದಲ್ಲಿರುವ ಶೆಡ್ ಮೇಲಿನ ಆಸ್ತಿ ತೆರಿಗೆ ಪಾವತಿಸುವಂತೆ ಜಯಣ್ಣ ಅವರಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಪಟ್ಟಣಗೆರೆ ಶೆಡ್ ಮಾಲೀಕ ಕೆ ಜಯಣ್ಣ ಅವರು ನಿಗದಿಯ ಜಾಗಕ್ಕೆ ಪಾಲಿಕೆಗೆ ಆಸ್ತಿ ತೆರಿಗೆಗೆ ಪಾವತಿಸಿಲ್ಲ. ಈ ಹಿನ್ನೆಲೆ ಆರ್ ಆರ್ ನಗರ ವಲಯ ಸಹಾಯಕ ಕಂದಾಯ ಅಧಿಕಾರಿ ಕೆ ಜಯಣ್ಣಗೆ ನೋಟೀಸ್ ಜಾರಿ ಮಾಡಿದ್ದಾರೆ.
2008ರಿಂದ ಈ ಸ್ವತ್ತಿಗೆ ಇದುವರೆಗೂ ಕೂಡ ಆಸ್ತಿ ತೆರಿಗೆ ಪಾವತಿಯಾಗಿಲ್ಲ. ಈ ಹಿನ್ನೆಲೆ 15 ದಿನಗಳ ಅವಧಿಯ ಒಳಗಾಗಿ ಸಂಬಂಧಪಟ್ಟ ದಾಖಲೆ ಹಾಗೂ ಕಾರಣ ನೀಡುವಂತೆ ನೋಟೀಸ್ ನೀಡಿದ್ದಾರೆ.
ಕಂದಾಯ ನಿರೀಕ್ಷಕರು ಜಯಣ್ಣ ಅವರಿಗೆ ಖುದ್ದಾಗಿ ನೋಟಿಸ್ ನೀಡಿದ್ದು, ಅವರಿಂದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಜಮೀನು ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, 2009ರಿಂದ ಅನ್ವಯವಾಗುವ ತೆರಿಗೆಯನ್ನು ಪಾಲಿಕೆ ನಿಯಮಗಳ ಪ್ರಕಾರ ಸಂಗ್ರಹಿಸಲಾಗುವುದು ಎಂದು ಬಿಬಿಎಂಪಿಯ ಕೆಂಗೇರಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.