ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಕುರಿತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಮಾತನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಕೆ ನೀಡಿದೆ.
ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ, ಭಾಷಣದ ತಯಾರಿಯಲ್ಲಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದ್ದು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಹುಮ್ಮಸ್ಸಿನಲ್ಲಿದ್ದ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಪನೌತಿ, ಪಿಕ್ ಪಾಕೆಟ್ ಎಂಬ ಪದಗಳ ಬಳಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಾಂಗ್ರೆಸ್ ನಾಯಕನನ್ನು ಎಚ್ಚರಿಸಿದೆ. ಈ ಹಿಂದೆ ಪ್ರಧಾನಿ ಮೋದಿ ವಿರುದ್ಧ ಮಾತನಾಡುವಾಗ ಬಳಸಿದ ಪದಗಳ ಸಂಬಂಧ ಕೇಂದ್ರ ಚುನಾವಣಾ ಆಯೋಗ ವಾರ್ನಿಂಗ್ ನೀಡಿದ್ದು, ಮೋದಿ ಬಗ್ಗೆ ಮಾತನಾಡುವಾಗ ಎಚ್ಚರವಾಗಿರಿ ಎಂದು ರಾಹುಲ್ ಗಾಂಧಿಗೆ ತಾಕೀತು ಮಾಡಿದೆ.
ಮುಂಬರುವ ಚುನಾವಣೆ ಪ್ರಚಾರ ಕಾರ್ಯದಲ್ಲೂ ತಮ್ಮ ಸೂಚನೆಯನ್ನು ಪಾಲಿಸಬೇಕು ಎಂದು ರಾಹುಲ್ ಗಾಂಧಿಗೆ ಕಮಿಷನ್ ಆದೇಶಿಸಿದೆ. ಚುನಾವಣಾ ಆಯೋಗವು ಮಾರ್ಚ್ 1 ರಂದು ಹೊರಡಿಸಿರುವ ತನ್ನ ಆದೇಶದಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಪಕ್ಷಗಳು, ಅಭ್ಯರ್ಥಿಗಳು ಮತ್ತು ಸ್ಟಾರ್ ಪ್ರಚಾರಕರು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಈ ಹಿಂದೆ ನೊಟೀಸ್ ಪಡೆದಿರುವ ಪಕ್ಷದ ಪ್ರಚಾರಕರು ಮತ್ತು ಅಭ್ಯರ್ಥಿಗಳು ಮಾದರಿ ಸಂಹಿತೆಯನ್ನು ಪುನರಾವರ್ತಿತವಾಗಿ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
