ಮೈಸೂರು:
ಬರ್ತ್ ಡೇ ಪಾರ್ಟಿಯಲ್ಲಿ ಮಾತಿನ ಚಕಮಕಿ ನಡೆದು ಬಿಜೆಪಿ ಮುಖಂಡನೋರ್ವನನ್ನು ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆಗೈದ ಘಟನೆ ಕುವೆಂಪು ನಗರದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸ್ಥಳೀಯ ಬಿಜೆಪಿ ಮುಖಂಡ ಎಸ್. ಆನಂದ್ ಕೊಲೆಯಾದವರು. ಆನಂದ್ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದರೆನ್ನಲಾಗಿದೆ. ಪಾರ್ಟಿ ಮುಗಿಸಿ ಸರ್ವೀಸ್ ಅಪಾರ್ಟ್ ಮೆಂಟ್ ನಲ್ಲಿ ಮಾಡಿದ್ದ ರೂಮ್ ಗೆ ಮರಳಿದ್ದ ವೇಳೆ ಈ ಕೃತ್ಯ ನಡೆಸಲಾಗಿದೆ.
ಬರ್ತ್ ಡೇ ಪಾರ್ಟಿ ನಡೆಯುವಾಗ ಸ್ನೇಹಿತರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ತಿರುಗಿ ಬಿಯರ್ ಬಾಟಲಿಯಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಆನಂದ್ ಮೇಲೆ ಮನಸೋ ಇಚ್ಛೆ ಬಾಟಲಿಯಿಂದ ಇರಿದು ಹತ್ಯೆ ಮಾಡಲಾಗಿದೆ.
ಪಾರ್ಟಿಯಲ್ಲಿದ್ದವರಲ್ಲೇ ಗಲಾಟೆ ಆರಂಭವಾಗಿದ್ದು, ಆಗ ಬಾಟಲ್ ನಲ್ಲಿ ಚುಚ್ಚಿ ಕೊಲೆ ಮಾಡಿದ್ದಾರೆ. ಹೀಗಾಗಿ ಪಾರ್ಟಿಯಲ್ಲಿ ಯಾರು ಇದ್ದರು ಎಂಬ ಮಾಹಿತಿ ಗೊತ್ತಾಗಿದ್ದು, ಅವರೆಲ್ಲರನ್ನು ಹಿಡಿದು ವಿಚಾರಣೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಆನಂದ್ ಮೈಸೂರು ನಗರ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿದ್ದರು, ರಿಯಲ್ ಎಸ್ಟೇಟ್ ಬಡ್ಡಿ ವ್ಯವಹಾರ ಮಾಡುತ್ತಿದ್ದರೆನ್ನಲಾಗಿದೆ. ಈ ಹಳೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸರಸ್ವತಿಪುರಂ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
