ಬೆಂಗಳೂರು
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಜೈಲು ಪಾಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ಈ ಮಧ್ಯೆ ದರ್ಶನ್‌ಗೆ ಬೆಂಬಲ ನೀಡುವ ಭರದಲ್ಲಿ ನಾಲಿಗೆ ಹರಿಬಿಡುತ್ತಿರುವ ದರ್ಶನ್ ಅಭಿಮಾನಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಓರ್ವ ದರ್ಶನ್ ಅಭಿಮಾನಿಯನ್ನು ಬಂಧಿಸಲಾಗಿದೆ.
ಕನ್ನಡ ಚಿತ್ರರಂಗದ ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಸವೇಶ್ವರ ನಗರ ಪೊಲೀಸರು ದರ್ಶನ್ ಅಭಿಮಾನಿಯನ್ನು ಬಂಧಿಸಿದ್ದಾರೆ. ಚೇತನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ನಟ ದರ್ಶನ್ ಬಂಧನಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದು ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಪೈಕಿ ಚೇತನ್ ಎನ್ನುವಾತ ಬಹಿರಂಗವಾಗಿ ಉಮಾಪತಿ ಗೌಡಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋಗಳನ್ನು ನೋಡಿದ ನಿರ್ಮಾಪಕ ಉಮಾಪತಿ ಗೌಡ ಬೆದರಿಕೆ ಹಾಕಿದ್ದ ಯುವಕನ ಬಗ್ಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅಭಿಮಾನಿ ಚೇತನ್ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 504,506 ಅಡಿಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಕೂಡಲೇ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ನಾಲಿಗೆ ಬಿಟ್ಟ ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ದೂರು ದಾಖಲಾಗಿದೆ. ದರ್ಶನ್ ಅಭಿಮಾನಿ ಮಂಗಳ ಎಂಬಾಕೆಯ ವಿರುದ್ಧ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟ ದರ್ಶನ್ ಬಂಧನವಾಗುತ್ತಿದ್ದಂತೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮನಬಂದಂತೆ ಎಲ್ಲರಿಗೂ ಬೈಯುತ್ತಿದ್ದ ಮಂಗಳ, ಇತ್ತೀಚಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಯ ಹುಚ್ಚಾಟದ ವಿರುದ್ಧ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಗರಂ ಆಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷ ಜಾನಿಕೀರಾಮ್ ದರ್ಶನ್ ಅಭಿಮಾನಿ ಮಂಗಳ ವಿರುದ್ಧ ದೂರು ನೀಡಿದ್ದಾರೆ. ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ಧ ಧಿಕ್ಕಾರ ಕೂಗಿಸುತ್ತೀಯಾ?. ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸಲು ಅವಕಾಶ ಕೊಟ್ಟಿರುವುದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕ್ತೀಯಾ? ಎಂದು ಅವಾಚ್ಯ ಶಬ್ಧಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿಯನ್ನು ಮಹಿಳೆ ನಿಂದಿಸಿದ್ದಾಳೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಮಹಿಳೆ ವಿರುದ್ಧ ಸಿಡಿದೆದ್ದ ಜೆಡಿಎಸ್ ಕಾರ್ಯಕರ್ತರು ದೂರು ನೀಡಿ ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
