ಬೆಳಗಾವಿ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಸುರ್ವಣಸೌಧ ಸಾಲು ಸಾಲು ಪ್ರತಿಭಟನೆಗೆ ಸಾಕ್ಷಿಯಾಗುತ್ತಿದೆ. 11 ವಿವಿಧ ಸಂಘಟನೆಗಳು, ತಮ್ಮ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಬೆಳಗಾವಿಯಲ್ಲಿ ಅಧಿವೇಶನದ ಹೊತ್ತಲ್ಲೇ ಮತ್ತೆ ಪಂಚಮಸಾಲಿ ಸಮುದಾಕ್ಕೆ 2A ಮೀಸಲಾತಿಗಾಗಿ ರಣಕಹಳೆ ಮೊಳಗಿಸಲಾಗಿದೆ. ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲ ಟ್ರ್ಯಾಕ್ಟರ್ ಚಲೋಗೆ ಕರೆ ನೀಡಲಾಗಿತ್ತು.
ಸರ್ಕಾರ ಪಂಚಮಸಾಲಿ ಮೀಸಲಾತಿ ಹೋರಾಟಗಾರರಿಗೆ ಶಾಕ್ ಕೊಟ್ಟಿದೆ. ಇಂದು ಮತ್ತು ನಾಳೆ ಹೋರಾಟದ ವಾಹನಗಳಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಿದೆ. ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಮೊಹಮ್ಮದ್ ರೋಷನ್ ಆದೇಶ ಮಾಡಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ, ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಆದರೆ, ಬಿಜೆಪಿ ನಾಯಕರ ಆರೋಪವನ್ನು ಸಚಿವರು ತಳ್ಳಿ ಹಾಕಿದ್ದಾರೆ.
ಈ ಮಧ್ಯೆ ಮಹದಾಯಿ ಯೋಜನೆ ಅನುಷ್ಠಾನ ಮಾಡಬೇಕು, ಕಬ್ಬಿನ ಬಿಲ್ ನಿಗದಿ ಮಾಡಬೇಕು, ವಕ್ಫ್ನಿಂದ ರೈತರ ಜಮೀನು ರಕ್ಷಣೆಗೆ ಒತ್ತಾಯಿಸಿ, ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ಲೇಬರ್ ನಿಗಮ ಸಂಘ, ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ಹೂಗಾರ ಮಹಾಸಭಾ ಸಂಘ ಪ್ರತಿಭಟನೆಗೆ ಮುಂದಾಗಿದೆ. ಗದಗ ಹರಪನಹಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ ಸೇರಿದಂತೆ ಹೀಗೆ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ.