ಚಿಕ್ಕಮಗಳೂರು:
2021ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ನ್ಯಾಯಾಲಯ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ತಾಯಿ ಸೇರಿ ನಾಲ್ವರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಪೋಕ್ಸೋ ಪ್ರಕರಣದ ಒಟ್ಟು 53 ಆರೋಪಿಗಳಲ್ಲಿ 49 ಜನರನ್ನು ಖಲಾಸೆಗೊಳಿಸಿ, ನಾಲ್ವರು ತಪ್ಪಿತಸ್ಥರೆಂದು ಕಳೆದ ಗುರುವಾರ ತೀರ್ಪು ನೀಡಿದ್ದ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಮೂರ್ತಿ ಶಾಂತಣ್ಣ ಆಳ್ವ ಅವರು, ಸಂತ್ರಸ್ತೆ ಬಾಲಕಿ ತಾಯಿ ಗೀತಾ ಮತ್ತು ಆಕೆಗೆ ಸಹಾಯ ಮಾಡಿದ್ದ ಗಿರೀಶ್, ದೇವಿಶರಣ್, ಅಭಿನಂದನ್ ಅಲಿಯಾಸ್ ಸ್ಮಾಲ್ ಅಭಿಗೆ ತಲಾ 25 ಸಾವಿರ ದಂಡ ಹಾಗೂ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.ಶೃಂಗೇರಿ ತಾಲೂಕಿನಲ್ಲಿ ಹಣಕ್ಕಾಗಿ ತಾಯಿಯೇ ಅಪ್ರಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ಈ ಪೋಕ್ಸೋ ಪ್ರಕರಣ 2021ರಲ್ಲಿ ಭಾರೀ ಸುದ್ದಿಯಾಗಿತ್ತು. ತಾಯಿಯ ಕಿರುಕುಳ ತಾಳಲಾರದೆ ಬಾಲಕಿ ವೇಶ್ಯಾವಾಟಿಕೆ ಒಪ್ಪಿದ್ದಳು. ಹೀಗಾಗಿ 2020ರ ಸೆಪ್ಟೆಂಬರ್ 1 ರಿಂದ 2021ರ ಜನವರಿ 27ರ ವರೆಗೂ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿತ್ತು.
ಕೊನೆಗೆ ಶೃಂಗೇರಿ ತಾಲೂಕಿನ ಕುಂಚೆಬೈಲ್ ಸಮೀಪದ ಗೋಚವಲ್ಲಿ ಗ್ರಾಮದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ 2021ರಲ್ಲಿ ಪೊಲೀಸರು ದಾಳಿ ಮಾಡಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದರು. ಈ ಒಂದೇ ಅತ್ಯಾಚಾರ ಪ್ರಕರಣದಲ್ಲಿ ಶೃಂಗೇರಿ ಪೊಲೀಸರು 53 ಜನರನ್ನು ಬಂಧಿಸಿ ಒಂದೇ ಪ್ರಕರಣದಲ್ಲಿ 38 ವಿವಿಧ ರೀತಿಯ ಚಾರ್ಜ್ ಶೀಟ್ ಸಲ್ಲಿಸಿದ್ದರು.