ಬೆಂಗಳೂರು:
ಬೆಂಗಳೂರು, ಜನವರಿ 17; ಇಷ್ಟು ದಿನ ಕಾಗದದಲ್ಲಿ ಮಾತ್ರ ಕಾಣುತ್ತಿದ್ದ ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. 73 ಕಿ. ಮೀ. ಉದ್ದ ರಸ್ತೆ ಕಾಮಗಾರಿಗೆ ಸುಮಾರು 21,091 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ತುಮಕೂರುರಸ್ತೆಯಿಂದ ಹೊಸೂರು ರಸ್ತೆ ಸಂಪರ್ಕಿಸುವ 8 ಪಥದ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ.
ಭೂ ಸ್ವಾಧೀನದ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಕೋರ್ಟ್ ಮೆಟ್ಟಿಲೇರಿತ್ತು. ಈಗ ಸ್ವಾಧೀನಪಡಿಸಿಕೊಂಡಿರುವ ಭೂಮಿಯಲ್ಲಿ ಕಾಮಗಾರಿ ಆರಂಭಿಸಲು ಕೋರ್ಟ್ ಒಪ್ಪಿಗೆ ಕೊಟ್ಟಿದೆ.
ಮೊದಲು ಪೆರಿಫೆರಲ್ ರಿಂಗ್ ರಸ್ತೆ ಯೋಜನೆ 65 ಕಿ. ಮೀ. ಇತ್ತು. ಹೊಸ ವಿನ್ಯಾಸದ ಪ್ರಕಾರ 73 ಕಿ. ಮೀ. ಆಗಿದ್ದು, 2,560 ಎಕರೆ ಭೂಮಿ ಯೋಜನೆಗೆ ಅಗತ್ಯವಿದೆ. 2017ರಲ್ಲಿ 3000 ಕೋಟಿ ಇದ್ದ ಅಂದಾಜು ವೆಚ್ಚ ಈಗ 21,091 ಕೋಟಿಗೆ ಏರಿಕೆಯಾಗಿದೆ.
ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯಲ್ಲಿ ಕಾಮಗಾರಿ ಆರಂಭಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತ, ಹೊಸಕೋಟೆ ರಸ್ತೆ ಮೂಲಕ ಈ ರಸ್ತೆ ಸಾಗಲಿದೆ.
ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಕಾಮಗಾರಿಯ ತಾಂತ್ರಿಕ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ಸರಣಿ ಸಭೆಗಳನ್ನು ನಡೆಸಲಾಗಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಹೇಳಿಕೆ ನೀಡಿದೆ.
ಕರ್ನಾಟಕ ಸರ್ಕಾರ ಮತ್ತು ಬಿಡಿಎ ಪಿಪಿಪಿ ಮಾದರಿಯಲ್ಲಿ ಈ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ಬಿಡಿಎ ರಸ್ತೆ ನಿರ್ಮಾಣದ ಟೆಂಡರ್ಗೆ ಸಂಬಂಧಿಸಿದ ದಾಖೆಗಳ ಕಡತವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಟೆಂಡರ್ ಪಡೆಯುವ ಸಂಸ್ಥೆ ರಸ್ತೆ ನಿರ್ವಹಣೆ ಮಾಡುವ ಜೊತೆಗೆ 30 ವರ್ಷಗಳ ಕಾಲ ಟೋಲ್ ಸಂಗ್ರಹ ಮಾಡುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಬಿಡಿಎ ಅಧ್ಯಕ್ಷ, ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಮಾತನಾಡಿ, “ಕೆಲವು ದಿನಗಳ ಹಿಂದೆ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿತ್ತು.
ಆದರೆ ಸುಪ್ರೀಂಕೋರ್ಟ್ ಅಂತಿಮ ಆದೇಶ ಬರದ ಕಾರಣ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಈಗ ಕೋರ್ಟ್ ಕಾಮಗಾರಿಗೆ ಅನುಮತಿ ನೀಡಿದೆ” ಎಂದು ಹೇಳಿದ್ದಾರೆ.
ಹಲವಾರು ಅಡೆತಡೆಗಳು ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಪ್ರಸ್ತಾವನೆಯನ್ನು ಬಿಡಿಎ 2017ರಲ್ಲಿ ಸಿದ್ಧಪಡಿಸಿತ್ತು. 1810 ಎಕರೆ ಭೂಮಿ ಯೋಜನೆಗೆ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಬಳಿಕ 750 ಎಕರೆ ಹೆಚ್ಚುವರಿ ಭೂಮಿ ಬೇಕು ಎಂದು ಅಂದಾಜಿಸಲಾಯಿತು. ಈ ಭೂ ಸ್ವಾಧೀನ ವಿವಾದ ಕೋರ್ಟ್ ಮಟ್ಟಿಲೇರಿತು.
ಹೆಚ್ಚುವರಿ ಭೂಮಿಯಲ್ಲಿ ಶೌಚಾಲಯ, ಟೋಲ್ ಬೂತ್ ಮುಂತಾದ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಬಿಡಿಎ ಹೇಳಿದೆ. ಬಿಡಿಎ ಯೋಜನೆಯ ನಕ್ಷೆಯನ್ನು ಬದಲಾವಣೆ ಮಾಡಿ 65 ಕಿ. ಮೀ. ಇದ್ದ ಪ್ರಸ್ತಾವಿತ ರಸ್ತೆಯನ್ನು 73 ಕಿ. ಮೀ. ಮಾಡಿತು.
ಪೆರಿಫೆರಲ್ ರಿಂಗ್ ರಸ್ತೆ ಸಂಪೂರ್ಣ ಸಿಗ್ನಲ್ ಮುಕ್ತವಾಗಿದೆ. ಇದು ಹೆಲಿಪ್ಯಾಡ್, ಇವಿಎಂ ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಯೋಜನೆಗಾಗಿ ಸುಮಾರು 38 ಸಾವಿರ ಮರಗಳನ್ನು ತೆಗೆಯಬೇಕಾಗುತ್ತದೆ. ಇವುಗಳಲ್ಲಿ ಹಲವಾರು ಮರಗಳನ್ನು ಸ್ಥಳಾಂತರ ಮಾಡಲಾಗುತ್ತದೆ.
ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಬದಲಾದಂತೆ, ವರ್ಷಗಳು ಬದಲಾದಂತೆ ಯೋಜನಾ ವೆಚ್ಚವೂ ಅಧಿಕವಾಗಿದೆ. ಅಂತಿಮವಾಗಿ ಈಗ ಕಾಮಗಾರಿ ಆರಂಭಕ್ಕೆ ಒಪ್ಪಿಗೆ ಸಿಕ್ಕಿದೆ. ಇಸ್ರೇಲ್ ಮೂಲದ ಕಂಪನಿ ಯೋಜನೆಗೆ ಟೆಂಡರ್ ಪಡೆಯಲು ಆಸಕ್ತಿ ತೋರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
