ಮಂಗಳೂರು:
ವೃದ್ಧ ದಂಪತಿಗಳ ಮನೆಗೆ ಕನ್ನ ಹಾಕಿ, ಚಿನ್ನಾಭರಣ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ದರೋಡೆ ಮಾಡಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್ ನ ನಾಲ್ವರು ಸದಸ್ಯರನ್ನು ಮಂಗಳೂರು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದರೋಡೆ ನಡೆದಿತ್ತು. ಕೋಟೆಕಣಿ ರಸ್ತೆಯಲ್ಲಿರುವ ವಿಕ್ಟರ್ ಮೆಂಡೋನ್ಕಾ ಮತ್ತು ಪೆಟ್ರೀಷಿಯಾ ಮೆಂಡೋನ್ಕಾ ಮನೆಗೆ ಮಧ್ಯ ರಾತ್ರಿ 1:45 ರ ವೇಳೆಗೆ ಕಿಟಕಿ ಗ್ರಿಲ್ ಗಳನ್ನು ಮುರಿಯುವ ಮೂಲಕ ನುಗ್ಗಿದ ಗ್ಯಾಂಗ್ ನ ಸದಸ್ಯರು, ವೃದ್ಧ ದಂಪತಿಗೆ ಥಳಿಸಿ ಚಿನ್ನಾಭರಣ, ವಾಚ್, ಮೊಬೈಲ್ ಫೋನ್ ಸೇರಿದಂತೆ 13 ಲಕ್ಷಕ್ಕೂ ಹೆಚ್ಚಿನ ಮೌಲ್ಯವುಳ್ಳ ವಸ್ತುಗಳನ್ನು ದರೋಡೆ ಮಾಡಿ, ಮನೆಯ ಮಾಲಿಕರ ಕಾರಿನಲ್ಲೇ ಪರಾರಿಯಾಗಿದ್ದಾರೆ. ದರೋಡೆಕೋರರು ಪರಾರಿಯಾಗಿದ್ದ ಕಾರು ಘಟನಾ ಸ್ಥಳದಿಂದ 25 ಕಿ.ಮೀ ದೂರವಿರುವ ಮುಲ್ಕಿ ಬಸ್ ನಿಲ್ದಾಣದ ಬಳಿ ಪತ್ತೆಯಾಗಿತ್ತು.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂಲ್ಕಿ ಬಸ್ ನಿಲ್ದಾಣದ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗ್ಯಾಂಗ್ ಮತ್ತೊಂದು ಬಸ್‌ನಲ್ಲಿ ಬೆಂಗಳೂರಿಗೆ ತೆರಳುವ ಮೊದಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಂಗಳೂರಿಗೆ ಮರಳಿದೆ ಎಂಬುದು ತಿಳಿದುಬಂದಿದೆ. ಬಸ್ ಕಂಡಕ್ಟರ್ ಅವರನ್ನು ಸಂಪರ್ಕಿಸಿ, ಹಾಸನ ಎಸ್ಪಿಗೆ ಮಾಹಿತಿ ನೀಡಿದ ನಂತರ ಸಕಲೇಶಪುರ ಡಿವೈಎಸ್ಪಿ ನೇತೃತ್ವದ ತಂಡ ಸಕಲೇಶಪುರ ಬಳಿ ಬಸ್ ನ್ನು ತಡೆದು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಜು ಸಿಂಗ್ವಾನಿಯಾ (24) ಮಯೂರ್ (30) ಬಾಲಿ (22) ಮತ್ತು ವಿಕ್ಕಿ (21) ಬಂಧಿತ ಆರೋಪಿಗಳಾಗಿದ್ದು ಎಲ್ಲರೂ ಮಧ್ಯಪ್ರದೇಶದವರಾಗಿದ್ದಾರೆ. ಚಡ್ಡಿ ಗ್ಯಾಂಗ್‌ನ ಸದಸ್ಯರು ಶಾರ್ಟ್ಸ್ ಧರಿಸಿ ಬರಿಗಾಲಿನಲ್ಲಿ ಚಲಿಸುತ್ತಾರೆ ಮತ್ತು ಮಳೆಗಾಲದಲ್ಲಿ ಸಕ್ರಿಯರಾಗಿರುತ್ತಾರೆ.
ಡಕಾಯಿತರು ತಮ್ಮ ಮೂರು ಮೊಬೈಲ್ ಫೋನ್‌ಗಳನ್ನು ಒಡೆದು ಹಾಕಿದರು ಮತ್ತು ದೀಪಗಳನ್ನು ಆನ್ ಮಾಡಲು ಅವಕಾಶ ನೀಡಲಿಲ್ಲ ಎಂದು ಪೆಟ್ರೀಷಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ವಿಕ್ಟರ್ ಗೆ ಕಾಲು ಮುರಿತವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆಟ್ರೀಷಿಯಾ ಅವರು ಎಚ್ಚರಗೊಂಡಾಗ ಸ್ಕ್ರೂ ಡ್ರೈವರ್‌ನಿಂದ ಆಕೆ ಮೇಲೆ ಹಲ್ಲೆ ನಡೆಸಲಾಯಿತು.
ಜೂನ್ 7ರ ವಾರದ ಅವಧಿಯಲ್ಲಿ ನಗರದ ಕೋಡಿಕಲ್‌ನಲ್ಲಿ ನಡೆದ ಮನೆಗಳ್ಳತನದಲ್ಲಿ ಇದೇ ಗ್ಯಾಂಗ್ ಭಾಗಿಯಾಗಿದೆಯೇ ಎಂದು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗ್ಯಾಂಗ್ ಪ್ರದೀಪ್ ಮನೆಯಲ್ಲಿ 10,000 ರೂ. ಗಳನ್ನು ದೋಚಿತ್ತು.