ಮಾರ್ಚ್ 7ರಿಂದ ಮೂರು ದಿನ `ಬೆಂಗಳೂರು- ಇಂಡಿಯಾ ನ್ಯಾನೋ ಸಮಾವೇಶ’

ಬೆಂಗಳೂರು:

ಮೊದಲ ಬಾರಿಗೆ ವರ್ಚುಯಲ್ ರೂಪ*10 ದೇಶಗಳು ಭಾಗಿ*25ಕ್ಕೂ ಹೆಚ್ಚು ಗೋಷ್ಠಿ

`ಸುಸ್ಥಿರ ಅಭಿವೃದ್ಧಿಗಾಗಿ ನ್ಯಾನೋ ತಂತ್ರಜ್ಞಾನ’ ಎನ್ನುವ ಧ್ಯೇಯದೊಂದಿಗೆ 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ’ ಸಮಾವೇಶವು ಪ್ರಥಮ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಮಾರ್ಚ್ 7ರಿಂದ 9ರವರೆಗೆ ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ಕ್ಕೆ ಕೆನಡಾ, ಇಸ್ರೇಲ್, ಜರ್ಮನಿ, ನೆದರ್ಲೆಂಡ್ಸ್ ಮತ್ತು ಜಪಾನ್ ಸೇರಿದಂತೆ 10 ರಾಷ್ಟ್ರಗಳು ಭಾಗವಹಿಸುತ್ತಿವೆ. ಜತೆಗೆ ಐದು ಉದ್ಯಮಸಂಸ್ಥೆಗಳು ಕೂಡ ಸಮಾವೇಶಕ್ಕೆ ಹೆಗಲು ಕೊಡುತ್ತಿವೆ. ಮಾರ್ಚ್ ಮತ್ತು 7-8ರಂದು ಸಮಾವೇಶದ ಚಟುವಟಿಕೆಗಳು ನಡೆಯಲಿದ್ದು, ಕೊನೆಯ ದಿನವಾದ 9ರಂದು ಇಡೀ ದಿನ ತಲಾ 1 ಗಂಟೆ ಕಾಲದ ಅವಧಿಯ ಟ್ಯುಟೋರಿಯಲ್ ಮಾದರಿಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ರೂಪಿಸಿ, ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನ್ಯಾನೋ ವಲಯದ ವಹಿವಾಟು ಸದ್ಯಕ್ಕೆ ಜಾಗತಿಕವಾಗಿ 75 ಶತಕೋಟಿ ಡಾಲರುಗಳಷ್ಟಿದೆ. ಇದು 2028ರ ಹೊತ್ತಿಗೆ 300 ಶತಕೋಟಿ ಡಾಲರ್ ತಲುಪಲಿದೆ. ಕೊರೋನಾ ಹಾವಳಿಯ ಸಂದರ್ಭದಲ್ಲಿ ನ್ಯಾನೋ ವಿಜ್ಞಾನ, ಜೈವಿಕ ವಿಜ್ಞಾನ ಮತ್ತು ಆರೋಗ್ಯ ವಿಜ್ಞಾನಗಳು ಕೈಜೋಡಿಸಿದ್ದರಿಂದ ಜನರ ಜೀವವನ್ನು ಉಳಿಸಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು.

ನ್ಯಾನೋ ಮೆಡಿಸಿನ್, ನ್ಯಾನೋ ಫೋಟೋನಿಕ್ಸ್, ನ್ಯಾನೋ ಟೆಕ್ಸ್-ಟೈಲ್ಸ್ ಮತ್ತು ಹೈಡ್ರೋಜನ್ ಆರ್ಥಿಕತೆ ಕುರಿತು ಸಮಾವೇಶದಲ್ಲಿ ಪ್ರಧಾನವಾಗಿ ಗೋಷ್ಠಿಗಳು ನಡೆಯಲಿವೆ. ಒಟ್ಟಾರೆಯಾಗಿ ನವೋದ್ಯಮಗಳು, ಭಾರೀ ಕೈಗಾರಿಕೆಗಳು, ಮಧ್ಯಮ ಮತ್ತು ಸಣ್ಣ ಉದ್ದಿಮೆಗಳು, ವೆಂಚರ್ ಕ್ಯಾಪಿಟಲ್ ಇವುಗಳತ್ತ ಗಮನವನ್ನು ಕೇಂದ್ರೀಕರಿಸಲಾಗುವುದು ಎಂದು ಅವರು ವಿವರಿಸಿದರು.

ಈ ಸಮಾವೇಶದಲ್ಲಿ 25ಕ್ಕೂ ಹೆಚ್ಚು ಪೂರ್ಣಪ್ರಮಾಣದ ಗೋಷ್ಠಿಗಳನ್ನು ಏರ್ಪಡಿಸಿದ್ದು, 75ಕ್ಕೂ ಹೆಚ್ಚು ಪರಿಣತರು ಮಾತನಾಡಲಿದ್ದಾರೆ. ಜತೆಗೆ, 40 ಪ್ರದರ್ಶನ ಮಳಿಗೆಗಳು ಇರಲಿದ್ದು, ಒಟ್ಟಾರೆಯಾಗಿ 4 ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ನ್ಯಾನೋ ವಿಜ್ಞಾನದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿರುವ ಐವರು ಯುವ ಪ್ರತಿಭಾವಂತರಿಗೆ ರಾಜ್ಯ ಸರಕಾರದ ವತಿಯಿಂದ `ನ್ಯಾನೋ ಎಕ್ಸಲೆನ್ಸ್’ ಪುರಸ್ಕಾರ ಮತ್ತು `ಸಿಎನ್ಆರ್ ರಾವ್ ಪುರಸ್ಕಾರ’ಗಳನ್ನು ಪ್ರದಾನ ಮಾಡಲಾಗುವುದು.

ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು `ನ್ಯಾನೋ ಫಾರ್ ಯಂಗ್’ ಮತ್ತು ನ್ಯಾನೋ ಕ್ವಿಜ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಸಪ್ರಶ್ನೆಗೆ ಈಗಾಗಲೇ ರಸಪ್ರಶ್ನೆ ಸ್ಪರ್ಧೆಗೆ 23 ರಾಜ್ಯ ಮತ್ತು 5 ಕೇಂದ್ರಾಡಳಿತ ಪ್ರದೇಶಗಳ 650 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನವು ಭವಿಷ್ಯದ ನಿರ್ಣಾಯಕ ಸಂಗತಿಯಾಗಿದ್ದು, ರಾಜ್ಯ ಸರಕಾರವು ಇದರ ಬೆಳವಣಿಗೆಗೆ ಸಾಕಷ್ಟು ಆದ್ಯತೆ ಕೊಟ್ಟಿದೆ. ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಷನ್ ಗ್ರೂಪ್ ಮೂಲಕ ಈಗಾಗಲೇ ರಾಜ್ಯದ 1,500 ಕಾಲೇಜುಗಳಿಗೆ ಸಂಶೋಧನೆಯನ್ನು ಪ್ರೋತ್ಸಾಹಿಸಲು 200 ಕೋಟಿ ರೂ. ವಿತರಿಸಲಾಗಿದ್ದು, ವಿಜ್ಞಾನದ ಬಗ್ಗೆ ಕುತೂಹಲವುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ನ್ಯಾನೋ ವಲಯದ ಬೆಳವಣಿಗೆಗೆ ಸರಕಾರವು ಆರ್ಥಿಕ ಸಹಾಯ ನೀಡುತ್ತಿದ್ದು, ಈ ಕ್ಷೇತ್ರದ ಅಗಾಧ ಸಾಮರ್ಥ್ಯವನ್ನು ಮನದಟ್ಟು ಮಾಡಿಕೊಂಡಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದರು.

ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಪ್ರೊ.ನವಕಾಂತ ಭಟ್ ಮಾತನಾಡಿ, `ಈ ಜ್ಞಾನಧಾರೆಗೆ ಉಜ್ವಲ ಭವಿಷ್ಯವಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಇದು ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಕಾರ್ಯಕಾರಿ ಸಮಿತಿ ಮುಖ್ಯಸ್ಥ ಜಗದೀಶ್ ಪಾಟಣಕರ್, ಸಮಾವೇಶದ ಅಧ್ಯಕ್ಷರಾದ ಪ್ರೊ.ಅಜಯ್ ಕುಮಾರ್ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ ಉಪಸ್ಥಿತರಿದ್ದರು.

ಮಾರ್ಚ್ 7ರಿಂದ ಆರಂಭವಾಗಲಿರುವ 12ನೇ ವರ್ಷದ ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ದ ಮಾಹಿತಿ ಕೈಪಿಡಿಯನ್ನು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಜೊತೆಯಲ್ಲಿ ಜಗದೀಶ್ ಪಾಟಣ್ಕರ್, ರ್ಪ್ರೊ .ಅಜಯ್ ಕುಮಾರ್ ಸೂದ್, ಇ.ವಿ.ರಮಣ ರೆಡ್ಡಿ, ಪ್ರೊ.ನವಕಾಂತ ಭಟ್ ಮತ್ತು ಬಸವರಾಜು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap