ಹಾಸನ ಚಿಕ್ಕತಿರುಪತಿಯಲ್ಲಿ ಜಾತ್ರೆ ಪ್ರಸಾದ ಸೇವಿಸಿ 50 ಭಕ್ತರು ಅಸ್ವಸ್ಥ

ಹಾಸನ:

    ಹಾಸನ  ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ ತಿರುಪತಿ  ಗ್ರಾಮದಲ್ಲಿ, ಚಿಕ್ಕತಿರುಪತಿ ಎಂದೇ ಖ್ಯಾತವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ  ದೇವಾಲಯದ ಜಾತ್ರೆ  ಮಹೋತ್ಸವದ ವೇಳೆ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥರಾಗಿದ್ದಾರೆ. ಖಾಸಗಿ ಸಂಸ್ಥೆಯೊಂದರಿಂದ ವಿತರಿಸಲಾದ ಪ್ರಸಾದ  ಸೇವಿಸಿದ 50ಕ್ಕೂ ಅಧಿಕ ಭಕ್ತರು ಅಸ್ವಸ್ಥರಾಗಿದ್ದಾರೆ. ಭಾನುವಾರ ರಾತ್ರಿ 7:30ರ ಸುಮಾರಿಗೆ ಸುಮಾರು 1,500 ಭಕ್ತರಿಗೆ ಈ ಪ್ರಸಾದ ವಿತರಣೆಯಾಗಿದೆ. ಇದನ್ನು ಸೇವಿಸಿದ ಕೆಲ ಭಕ್ತರು ಅಸ್ವಸ್ಥರಾಗಿದ್ದಾರೆ.

   ಮಾಲೆಕಲ್ ತಿರುಪತಿ ದೇವಾಲಯವು ಹಾಸನ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಇದನ್ನು ಚಿಕ್ಕತಿರುಪತಿ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಶ್ರೀ ವೆಂಕಟರಮಣ ಸ್ವಾಮಿ ಮತ್ತು ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸುವ ಸ್ಥಳವಾಗಿದ್ದು, ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಈ ಬಾರಿಯ ಜಾತ್ರೆಯ ಸಂದರ್ಭದಲ್ಲಿ, ದೇವಾಲಯದ ಹೊರಗೆ ಖಾಸಗಿ ಸಂಸ್ಥೆಯೊಂದರಿಂದ ಮೊಸರು ಮತ್ತು ಬಿಸಿಬೇಳೆಬಾತ್ ರೂಪದಲ್ಲಿ ಪ್ರಸಾದ ವಿತರಿಸಲಾಗಿತ್ತು.

   ಪ್ರಸಾದ ಸೇವಿಸಿದ ಕೆಲವೇ ಗಂಟೆಗಳಲ್ಲಿ, ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಹಲವು ಭಕ್ತರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಒಟ್ಟು 50ಕ್ಕೂ ಅಧಿಕ ಮಂದಿ ಈ ಲಕ್ಷಣಗಳಿಂದ ಬಳಲುತ್ತಿದ್ದರು. ಸ್ಥಳೀಯ ಆಡಳಿತವು ತಕ್ಷಣ ಕ್ರಮ ಕೈಗೊಂಡು, ಅಸ್ವಸ್ಥರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿತು. ಸದ್ಯ, 30ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

   ತಕ್ಷಣದ ವೈದ್ಯಕೀಯ ಸೌಲಭ್ಯದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿದ್ದು, ಭಕ್ತರು ಸೇವಿಸಿದ ಪ್ರಸಾದದ ಮಾದರಿಗಳನ್ನು ಸಂಗ್ರಹಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಪರೀಕ್ಷೆಗಾಗಿ ಕಳುಹಿಸಿದೆ.

Recent Articles

spot_img

Related Stories

Share via
Copy link