ಬೆಂಗಳೂರು :
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗಳ ಪಟ್ಟಿ ರಿವೀಲ್ ಆದಾಗ ಅಚ್ಚರಿ ಎನಿಸಿದ್ದು ಚೈತ್ರಾ ಕುಂದಾಪುರ ಅವರ ಹೆಸರು. ಸಾಕಷ್ಟು ವಿವಾದ ಮಾಡಿಕೊಂಡಿದ್ದ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ಸೈಲೆಂಟ್ ಆಗಿದ್ದರು. ಚೈತ್ರಾ ಹೊರಗಡೆ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಬಿಗ್ ಬಾಸ್ನಲ್ಲಿ ಇದರ ಲೆಕ್ಕವನ್ನು ಜಗದೀಶ್ ಅವರು ನೀಡಿದ್ದಾರೆ. ಇದರಿಂದ ಇಬ್ಬರ ಮಧ್ಯೆ ದೊಡ್ಡ ಜಗಳವೇ ನಡೆದು ಹೋಗಿದೆ.
ಚೈತ್ರಾ ತಮ್ಮ ಸಹೋದರಿ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದವರು ಜಗದೀಶ್. ಇದಕ್ಕೆ ಹಲವು ಕಾರಣಗಳು ಇದ್ದವು. ಇಬ್ಬರೂ ಜೈಲಿಗೆ ಹೋಗಿ ಬಂದಿದ್ದರು. ಇದನ್ನು ಜಗದೀಶ್ ಅವರು ಹೆಚ್ಚು ಹೈಲೈಟ್ ಮಾಡುತ್ತಾ ಇದ್ದರು. ಈಗ ಅವರು ಚೈತ್ರಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈ ಕುರಿತು ಹೊಸ ಪ್ರೋಮೋ ಹಾಕಲಾಗಿದೆ.
ಚೈತ್ರಾ ಹಾಗೂ ಜಗದೀಶ್ ಮಧ್ಯೆ ಯಾವುದೋ ವಿಚಾರಕ್ಕೆ ಕಿರಿಕ್ ಆಗಿದೆ. ‘ನನಗೆ ಫಾಲೋವರ್ಸ್ ಇದಾರೆ. ಆಕೆ ಮೇಲೆ 28 ಕೇಸ್ ಇದೆ’ ಎಂದರು ಜಗದೀಶ್. ಇದು ಚೈತ್ರಾ ಅವರನ್ನು ಕೆರಳಿಸಿತು. ‘ತಾಕತ್ ಇದ್ರೆ ನನ್ನ ಎದುರಿಗೆ ಬಂದು ಮಾತನಾಡಲಿ. ನನ್ ಕೇಸ್ ಬಗ್ಗೆ ಮಾತನಾಡೋ ಅಧಿಕಾರ ಯಾರಿಗೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ. ಅಪ್ಪನಿಗೆ ಹುಟ್ಟಿದ್ರೆ ನನ್ನ ಎದುರು ಬಂದು ಮಾತನಾಡಲಿ’ ಎಂದು ಸವಾಲು ಹಾಕಿದ್ದಾರೆ ಚೈತ್ರಾ.
ಕುಂದಾಪುರದ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸೋ ಭರವಸೆ ನೀಡಿ ಹಣ ಪಡೆದ ಆರೋಪ ಚೈತ್ರಾ ಮೇಲೆ ಇದೆ. ಈ ಕೇಸ್ನಲ್ಲಿ ಅವರು ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಇತ್ತೀಚೆಗೆ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿದ್ದರು. ‘ನೀವು ಮಾತನಾಡಬೇಕು’ ಎಂದು ಜನರಿಂದ ಪತ್ರ ಬಂದ ಬಳಿಕ ಅವರು ವೈಲೆಂಟ್ ಆಗಿದ್ದಾರೆ.