ಪಾಟ್ನಾ:
ವಿದ್ಯಾರ್ಥಿನಿ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.ಸಂತ್ರಸ್ತ ಯುವತಿ ಭಗವಾನ್ ಬಜಾರ್ ಪೊಲೀಸ್ ಠಾಣೆಗೆ ಆಗಮಿಸಿ, ದೂರು ನೀಡಿದ್ದಾರೆ ಎಂದು ಸರನ್ ಪೊಲೀಸ್ ಅಧೀಕ್ಷಕ ಕುಮಾರ್ ಆಶಿಶ್ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಮೂಲಕ ಆರೋಪಿಯೊಬ್ಬ ಸಂಪರ್ಕಕ್ಕೆ ಬಂದಿದ್ದ. ಜನವರಿ 16ರಂದು ಕಾಲೇಜು ಪೂರ್ಣಗೊಂಡ ಬಳಿಕ ಮನೆಗೆ ವಾಪಸ್ಸಾಗುತ್ತಿದ್ದೆ. ಈ ವೇಳೆ ಕರೆ ಮಾಡಿದ ಆತ ಭೇಟಿಯಾಗುವಂತೆ ತಿಳಿಸಿದ್ದ. ಆತನೊಂದಿಗೆ ಕಾಲೇಜು ಬಳಿ ಹೋದಾಗ, ಅಲ್ಲಿ ಆತನ ಮೂವರು ಸ್ನೇಹಿತರಿರುವುದು ಕಂಡು ಬಂದಿತ್ತು. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಅವರು, ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳು ಬೆದರಿಕೆ ಹಾಕಿರುವುದಾಗಿಯೂ ತಿಳಿಸಿದ್ದಾಳೆ.
ಫೋರೆನ್ಸಿಕ್ ತಂಡವು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ದೃಢೀಕರಿಸಲು ಪುರಾವೆಗಳನ್ನು ಸಂಗ್ರಹಿಸಿದೆ. ಇದೀಗ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಮೂವರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.