ವಿಶ್ವಸಂಸ್ಥೆ:
ಉಕ್ರೇನ್ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಶುಕ್ರವಾರ ಉದ್ದೇಶಿಸಿ ಮಾತನಾಡಿದ ತಿರುಮೂರ್ತಿ ಅವರು ಜೈವಿಕ ಕಾರ್ಯಕ್ರಮಗಳ ವರದಿಗಳು, ಉಕ್ರೇನ್‌ಗೆ ಸಂಬಂಧಿಸಿದ ಜೈವಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳ ಇತ್ತೀಚಿನ ಹೇಳಿಕೆಗಳು ಮತ್ತು ವ್ಯಾಪಕ ಮಾಹಿತಿಯನ್ನು ಭಾರತವು ಗಮನಿಸುತ್ತಿದೆ ಎಂದು ಹೇಳಿದರು.
ಉಕ್ರೇನ್‌ನಲ್ಲಿ ಜೈವಿಕ ಪ್ರಯೋಗಾಲಯಗಳ ವಿಷಯದ ಕುರಿತು ರಷ್ಯಾ ಭದ್ರತಾ ಮಂಡಳಿಯ ಸಭೆಗೆ ಕರೆ ನೀಡುತ್ತಿದ್ದಂತೆ, ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಒಪ್ಪಂದದ ಅಡಿಯಲ್ಲಿ ಬಾಧ್ಯತೆಗಳಿಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಸಂಬಂಧಪಟ್ಟ ಪಕ್ಷಗಳ ನಡುವೆ ಸಮಾಲೋಚನೆ ಮತ್ತು ಸಹಕಾರದ ಮೂಲಕ ತಿಳಿಸಬೇಕು ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಉಕ್ರೇನಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ತೀವ್ರ ಕಳವಳವನ್ನು ಭಾರತ ಪದೇಪದೆ ವ್ಯಕ್ತಪಡಿಸುತ್ತಿದೆ, ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಹೇಳಿದರು.
ಉಕ್ರೇನ್ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಶುಕ್ರವಾರ ಉದ್ದೇಶಿಸಿ ಮಾತನಾಡಿದ ತಿರುಮೂರ್ತಿ ಅವರು ಜೈವಿಕ ಕಾರ್ಯಕ್ರಮಗಳ ವರದಿಗಳು, ಉಕ್ರೇನ್‌ಗೆ ಸಂಬಂಧಿಸಿದ ಜೈವಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳ ಇತ್ತೀಚಿನ ಹೇಳಿಕೆಗಳು ಮತ್ತು ವ್ಯಾಪಕ ಮಾಹಿತಿಯನ್ನು ಭಾರತವು ಗಮನಿಸುತ್ತಿದೆ ಎಂದು ಹೇಳಿದರು.
‘ಈ ಸಂದರ್ಭದಲ್ಲಿ, ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಸಂಪೂರ್ಣ ವರ್ಗವನ್ನು ನಿಷೇಧಿಸುವ ಪ್ರಮುಖ ಜಾಗತಿಕ ಮತ್ತು ತಾರತಮ್ಯರಹಿತ ನಿಶಸ್ತ್ರೀಕರಣ ಸಮಾವೇಶವಾಗಿ ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಸಮಾವೇಶಕ್ಕೆ (ಬಿ ಟಿ ಡಬ್ಲ್ಯೂಸಿ) ಭಾರತ ನೀಡುವ ಪ್ರಾಮುಖ್ಯತೆಯನ್ನು ನಾವು ಒತ್ತಿಹೇಳಲು ಬಯಸುತ್ತೇವೆ,’ ಎಂದು ಅವರು ಹೇಳಿದರು.
ಬಿ ಟಿ ಡಬ್ಲ್ಯೂಸಿ ಯ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಅಕ್ಷರಶಃ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ತಿರುಮೂರ್ತಿ ಸ್ಪಷ್ಟಪಡಿಸಿದರು. ಬಿಟಿಡಬ್ಲ್ಯೂಸಿ ಅಡಿಯಲ್ಲಿ ಕಟ್ಟುಪಾಡುಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಕನ್ವೆನ್ಷನ್‌ನ ನಿಬಂಧನೆಗಳು ಮತ್ತು ಸಂಬಂಧಪಟ್ಟ ಪಕ್ಷಗಳ ನಡುವಿನ ಸಮಾಲೋಚನೆ ಹಾಗೂ ಸಹಕಾರದ ಮೂಲಕ ತಿಳಿಸಬೇಕು ಎನ್ನುವುದಲ್ಲಿ ಭಾರತ ವಿಶ್ವಾಸವಿಡುತ್ತದೆ,’ ಎಂದು ಅವರು ಹೇಳಿದರು.
ರಷ್ಯಾದ ಸಶಸ್ತ್ರ ಪಡೆಗಳು ತಮ್ಮ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಮುಂದುವರಿಸಿವೆ ಮತ್ತು ಉಕ್ರೇನಿನ ದಕ್ಷಿಣ, ಪೂರ್ವ ಮತ್ತು ಉತ್ತರದ ಹಲವಾರು ನಗರಗಳಿಗೆ ಮುತ್ತಿಗೆ ಹಾಕುತ್ತಿವೆ ಎಂದು ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳ ಅಧೀನ ಮಹಾ ಕಾರ್ಯದರ್ಶಿ ರೋಸ್ಮರಿ ಡಿಕಾರ್ಲೊ ಅವರು ಮಂಡಳಿಗೆ ತಿಳಿಸಿದರು.
ಮರಿಯುಪೋಲ್, ಖಾರ್ಕಿವ್, ಸುಮಿ ಮತ್ತು ಚೆರ್ನಿಹಿವ್ ಮೊದಲಾದ ನಗರಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ, ಅಲ್ಲಿನ ವಸತಿ ಪ್ರದೇಶಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಶೆಲ್ ದಾಳಿ ನಡೆಯುತ್ತಿದೆ, ಅದರ ಪರಿಣಾಮವಾಗಿ ನಾಗರಿಕರು ಸಾಯುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ ಎಂದು ರೋಸ್ಮರಿ ಡಿಕಾರ್ಲೊ ಹೇಳಿದರು.
‘ಈ ನಗರಗಳಲ್ಲಿ ಈಗ ಉಂಟಾಗುತ್ತಿರುವ ವಿಧ್ವಂಸಕತೆ ಸಂಪೂರ್ಣ ವಿನಾಶಕಾರಿ ಮತ್ತು ಭಯಾನಕವಾಗಿದೆ,’ ಮತ್ತು ಜನನಿಬಿಡ ಪ್ರದೇಶಗಳನ್ನು ಒಳಗೊಂಡಂತೆ ಕ್ಲಸ್ಟರ್ ಯುದ್ಧಸಾಮಗ್ರಿಗಳನ್ನು ರಷ್ಯನ್ ಪಡೆಗಳು ಬಳಸುತ್ತಿವೆ ಎಂಬ ವಿಶ್ವಾಸಾರ್ಹ ವರದಿಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ (ಓ ಹೆಚ್ ಸಿ ಹೆಚ್ ಆರ್) ಕಚೇರಿಗೆ ಲಭ್ಯವಾಗಿವೆ ಎಂದು ಡಿಕಾರ್ಲೊ ಹೇಳಿದರು.
‘ನಾಗರಿಕರು ಮತ್ತು ನಾಗರಿಕ ವಸ್ತುಗಳನ್ನು ದಾಳಿಗಳಿಗೆ ಗುರಿಮಾಡುವುದು ಹಾಗೆಯೇ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸುವುದು ಸಹ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ನಿಷೇಧಿಸಲಾಗಿದೆ ಮತ್ತು ಇದು ಯುದ್ಧ-ಅಪರಾಧಗಳಿಗೆ ಕಾರಣವಾಗಬಹುದು,’ ಎಂದು ಡಿಕಾರ್ಲೊ ಅವರು ಹೇಳಿದರು.
ಯುಎಸ್ ಬೆಂಬಲದೊಂದಿಗೆ ಉಕ್ರೇನ್‌ನಲ್ಲಿ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿರುಯವ ಬಗ್ಗೆ ತಾನು ಮಾಡಿದ ದಾವೆಗಳನ್ನು ಚರ್ಚಿಸಲು ರಷ್ಯಾ ಮಂಡಳಿಯನ್ನು ವಿನಂತಿಸಿದೆ.
‘ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ನೇರ ಮಾತುಕತೆಗಳು ಯುದ್ಧ ನಿಲ್ಲಿಸಲು ಕಾರಣವಾಗುತ್ತವೆ ಎನ್ನವುದು ಭಾರತದ ಪ್ರಾಮಾಣಿಕ ಆಶಯವಾಗಿದೆ,’ ಎಂದು ತಿರುಮೂರ್ತಿ ಹೇಳಿದರು.
‘ರಾಜತಾಂತ್ರಿಕ ಮತ್ತು ಮಾತುಕತೆಯ ಮಾರ್ಗವನ್ನು ಹೊರತುಪಡಿಸಿ ಬೇರೆ ಪರ್ಯಾಯವಿಲ್ಲ. ಈಗ ಉಂಟಾಗಿರುವ ಭೀಕರ ಮಾನವೀಯ ಪರಿಸ್ಥಿತಿಗೆ ತಕ್ಷಣದ ಮತ್ತು ತುರ್ತು ಗಮನದ ಅಗತ್ಯವಿದೆ,’ ಎಂದು ಅವರು ಹೇಳಿದರು.
ಭಾರತ ಮತ್ತೊಮ್ಮೆ ಯುಎನ್ ಚಾರ್ಟರ್ ಮತ್ತು ಅಂತರಾಷ್ಟ್ರೀಯ ಕಾನೂನಿನ ತತ್ವಗಳಿಗೆ ಬದ್ಧವಾಗಿರುವಂತೆ ಮತ್ತು ರಾಷ್ಟ್ರಗಳ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಗೌರವಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ