ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆಗಿಳಿದಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಆಗ್ರಹಿಸಿದೆ.ಗುರುವಾರ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸಲಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು, ಎಂಎಲ್‌ಸಿಗಳು ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.
ಮುಡಾ ಪ್ರಕರಣ ಮತ್ತು ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಹಾಗೂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತೇವೆಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪು ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಸಿಎಂ ತವರು ಜಿಲ್ಲೆ ಮೈಸೂರಾಗಿದ್ದು, ಅಲ್ಲಿನ ಲೋಕಾಯುಕ್ತ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ. ಹೈಕೋರ್ಟ್‌ನಿಂದ ತೀರ್ಪು ಹೊರಬಂದಿದ್ದರೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲ್ಲ ಅಂದಿದ್ದಾರೆ. ಆರೋಪಗಳು ಬಂದಿದ್ದರೂ ಏಕೆ ರಾಜೀನಾಮೆ ಕೊಡಬೇಕು ಅಂದಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಮೇಲೆ ಆರೋಪ ಕೇಳಿಬಂದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು, ಆಗ ಏನು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು.
ಬಿಜೆಪಿಯು ಇಂತಹ ಭ್ರಷ್ಟ ಸರ್ಕಾರ, ಭ್ರಷ್ಟ ಸಿಎಂ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ, ಪಾದಯಾತ್ರೆ ನಡೆಸಿದೆ. ಇದರ ಪರಿಣಾಮ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಹೈಕೋರ್ಟ್ ಸಹ ತನಿಖೆ ನಡೆಸಿ ಅಂದಿದೆ. ಈಗ ಜನಪ್ರತಿನಿಧಿಗಳ ಕೋರ್ಟ್ ಸಹ ತನಿಖೆ ಮಾಡಲು ಮೈಸೂರು ಲೋಕಾಯುಕ್ತ ಪೊಲೀಸರಿಗೆ ಸೂಚನೆ ಕೊಟ್ಟಿದೆ. ಯಾವ ನಾಯಕನ ವಿರುದ್ಧ ತನಿಖೆಗೆ ಆದೇಶ ಆಗಿದೆಯೋ ಆ ವ್ಯಕ್ತಿ ರಾಜ್ಯದ ಸಿಎಂ. ಇಂತಹ ಸಂದರ್ಭದಲ್ಲಿ ಪಾರದರ್ಶಕ ತನಿಖೆ ನಡೆಯುವುದು ಅನುಮಾನ. ಹಾಗಾಗಿ ಕೋರ್ಟ್ ತೀರ್ಪುಗಳನ್ನು ಒಪ್ಪಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ತನಿಖೆಗೆ ಸಹಕರಿಸಲಿ ಎಂದು ಒತ್ತಾಯಿಸಿದರು.
ಸಿಎಂ ವಿರುದ್ಧವೇ ಆರೋಪ ಕೇಳಿಬಂದಾಗ ಲೋಕಾಯುಕ್ತ ಪೊಲೀಸರಿಂದ ಪ್ರಾಮಾಣಿಕ ತನಿಖೆ ಮಾಡಲು ಸಾಧ್ಯವೇ? ಲೋಕಾಯುಕ್ತ ಪೊಲೀಸರಿಂದ ನ್ಯಾಯಬದ್ಧ ತನಿಖೆ ಅಸಾಧ್ಯ. ಕೋರ್ಟ್ ಆದೇಶ ಮಾಡಿರಬಹುದು, ಆದರೆ ತನಿಖೆ ಪಾರದರ್ಶಕ ಆಗುತ್ತಾ? ಹೀಗಾಗಿ ಸಿದ್ದರಾಮಯ್ಯ ಅವರು ಸಿಬಿಐಗೆ ಮುಡಾ ಪ್ರಕರಣ ವಹಿಸಬೇಕು. ಸ್ವತಂತ್ರ ತನಿಖಾ ಸಂಸ್ಥೆಯಿಂದಲೇ ಮುಡಾ ಪ್ರಕರಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರು ನನ್ನ ಜೊತೆ ಪಕ್ಷ ಇದೆ, ಶಾಸಕರು ಇದ್ದಾರೆ ಎಂದು ಹೇಳುತ್ತಿದ್ದಾರೆ. ಅದು ನಿಜವಾಗಿದ್ದರೆ ಭ್ರಷ್ಟಾಚಾರಕ್ಕೆ ಅವರ ಪಕ್ಷದವರು ಸಾಥ್ ಕೊಡುತ್ತಿದ್ದಾರೆಂದು ಅರ್ಥವೇ? ಸಿದ್ದರಾಮಯ್ಯ ತಡಮಾಡದೇ ಸಿಬಿಐ ತನಿಖೆಗೆ ಆದೇಶ ಮಾಡಬೇಕು. ತಕ್ಷಣ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೇನಾಮೆ ಕೊಡಬೇಕು. ಅದಕ್ಕಾಗಿ ಗುರುವಾರ ಬಿಜೆಪಿ ಶಾಸಕರು, ಸಂಸದರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.