ಕೊನೆಯ ದಿನದ ಕಲಾಪ : ವಿದಾಯ ಭಾಷಣದ್ದೇ ಕಾರುಬಾರು

ಬೆಂಗಳೂರು

     15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ವಿದಾಯ ಭಾಷಣದ್ದೇ ಕಾರುಬಾರು.ಕಳೆದ 5 ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ, ಜನತೆಯ ಹಿತಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡು ತನುಮನದಿಂದ ದುಡಿದ ಸಂತೃಪ್ತ, ಸಾರ್ಥಕ ಭಾವನೆಯನ್ನು ಎಲ್ಲ ಸದಸ್ಯರುಗಳು ವ್ಯಕ್ತಪಡಿಸಿ, ಪರಸ್ಪರ ಶುಭಾಶಯ, ಅಭಿನಂದನೆಗಳ ವಿನಿಮಯ ಮಾಡಿಕೊಂಡರು.

    ಜತೆಗೆ ಮತ್ತೆ ಚುನಾವಣೆಯಲ್ಲಿ ಗೆದ್ದು ಸದನಕ್ಕೆ ಬರೋಣ ಶುಭ ಹಾರೈಕೆಗಳ ವಿನಿಮಯವೂ ಸದನದಲ್ಲಿ ಆಯಿತು.ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಇಂದು ಸದಸ್ಯರುಗಳೆಲ್ಲರೂ ತಮ್ಮ ಕರ್ತವ್ಯ ಹಾಗೂ ಸದನದ ಕಲಾಪಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ರಾಜ್ಯದ ಹಿತಕ್ಕಾಗಿ ತಾವು ಕೆಲಸ ಮಾಡಿದ ರೀತಿ, ವೈಖರಿಗಳನ್ನು ಹೇಳಿಕೊಳ್ಳಲು ಅನುವು ಮಾಡಿಕೊಟ್ಟರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಸಚಿವ ಮಾಧುಸ್ವಾಮಿ, ಕಾಂಗ್ರೆಸ್‌ನ ಯು.ಟಿ. ಖಾದರ್, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್ ಸೇರಿದಂತೆ ಇಂದು ಸದನದಲ್ಲಿ ಹಾಜರಿದ್ದ ಬಹುತೇಕ ಸದಸ್ಯರುಗಳು ತಾವು ಮಾಡಿದ ಕೆಲಸ, ಸದನದಲ್ಲಿ ಜನ ಹಿತಕ್ಕಾಗಿ ಕೈಗೊಂಡ ತೀರ್ಮಾನ, ಹೋರಾಟ ಎಲ್ಲವನ್ನು ಮೆಲುಕು ಹಾಕಿದರು.

   5 ವರ್ಷಗಳ ಕಾಲ ಶಾಸಕರಾಗಿ ಸದನದಲ್ಲಿ ಏನೇ ಪ್ರಸ್ತಾಪ ಮಾಡಿದ್ದರೂ ಜನ ಹಿತಕ್ಕಾಗಿ ಎಲ್ಲವನ್ನು ಮಾಡಿದ್ದೇವೆ. ತಮ್ಮ ವಿಚಾರ ಅಭಿವ್ಯಕ್ತಿಕೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಆಗಿದೆ. ಈ ವಿಚಾರಗಳ ಅಭಿವ್ಯಕ್ತಿಕೆ ಸಂದರ್ಭದಲ್ಲಿ ಕೆಲವೊಮ್ಮೆ ಸಿಟ್ಟು, ಆವೇಶ, ಕೆಲ ಮಾತುಗಳು ಬಂದಿದ್ದರೂ ಅದೆಲ್ಲ ವೈಯುಕ್ತಿಕವಾಗಿ ಅಲ್ಲ.

   ಕೇವಲ ರಾಜ್ಯದ ಅಭಿವೃದ್ದಿ ಹಾಗೂ ಜನರ ಬದುಕಿಗೆ ಒಳ್ಳೆಯದನ್ನು ಮಾಡುವ ಸದುದ್ದೇಶದಿಂದ ಆಡಿದ ಮಾತುಗಳಾಗಿವೆ ಅಷ್ಟೇ. ಏನೇ ಇರಲಿ, ನಾವೆಲ್ಲಾ ವೈಯುಕ್ತಿಕವಾಗಿ ಸ್ನೇಹಿತರು. ಯಾವುದೇ ಕಹಿ ಮನಸ್ಸಿನಲ್ಲಿ ಇಲ್ಲ. ಎಲ್ಲೇ ಸಿಕ್ಕರೂ ಉಭಯ ಕುಶಲೋಪರಿ ಇದ್ದೇ ಇರುತ್ತದೆ ಎಂಬ ಭಾವನೆಯೊಂದಿಗೆ ಎಲ್ಲ ಸದಸ್ಯರು ವಿದಾಯ ಭಾಷಣ ಮಾಡಿದರು.

    ಸಚಿವ ಮಾಧುಸ್ವಾಮಿಯವರ ನಂತರ ಸದನದಲ್ಲಿ ವಿದಾಯ ಭಾಷಣ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ವಾತಂತ್ರ್ಯ ಹೋರಾಟ, ರಾಜ್ಯದ ಏಕೀಕರಣ ಚಳವಳಿ ಎಲ್ಲವನ್ನೂ ಮೆಲುಕು ಹಾಕಿ ಈ ಹೋರಾಟಗಳಿಂದಲೇ ಪ್ರಜಾಪ್ರಭುತ್ವ ದೇಶದಲ್ಲಿ ಗಟ್ಟಿಯಾಯಿತು ಎಂದರು.

   ದೇಶದ ಅಭಿವೃದ್ಧಿಗೆ ನೆಹರು, ಗಾಂಧೀಜಿ, ಡಾ. ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಗಟ್ಟಿ ಅಡಿಪಾಯವನ್ನು ಹಾಕಿಕೊಟ್ಟರು. ಕರ್ನಾಟಕ ಏಕೀಕರಣದ ಮೂಲಕ ರಾಜ್ಯದ ಅಭಿವೃದ್ಧಿಗೆ ದುಡಿದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಸಾಹುಕಾರ್ ಚೆನ್ನಯ್ಯ, ಅಂದಾನಪ್ಪ ಮೇಟಿ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಎಲ್ಲರ ಕೊಡುಗೆಗಳನ್ನು ನೆನೆದರು.

   15ನೇ ವಿಧಾನಸಭೆ 5 ವರ್ಷದ ಕಾಲಘಟ್ಟ. 2-3 ವಿಚಾರಗಳು ನಮ್ಮನ್ನು ಗಟ್ಟಿಗೊಳಿಸುತ್ತಾ ಹೋಯಿತು. ಪ್ರಜಾಪ್ರಭುತ್ವದಲ್ಲಿ ಅವಕಾಶಗಳನ್ನು ಯಾವ ರೀತಿ ಬಳಕೆ ಮಾಡಬೇಕು, ಸ್ಪಷ್ಟ ಬಹುಮತ ಬಾರದೆ ವಿರೋಧಾಭಾಸ ಪಕ್ಷಗಳು ಒಂದುಗೂಡಿ ಅಧಿಕಾರ ನಡೆಸುವಂತದ್ದು ಎಲ್ಲವನ್ನು ನೋಡಿದ್ದೇವೆ. ಜತೆಗೆ ಕೋವಿಡ್ ಸಂದರ್ಭದಲ್ಲಿ ಕಷ್ಟ ಬಂದಾಗಲೂ ಕರ್ತವ್ಯ ನಿಭಾಯಿಸುವ ನಮ್ಮ ಮನೋಭಾವನೆ ಕೋವಿಡ್ ನಂತರ ಮತ್ತೆ ದೇಶ ಕಟ್ಟುವ ಸವಾಲು, ಆರ್ಥಿಕತೆಯ ಚೇತರಿಕೆ ಜತೆಗೆ ಸಾಮಾಜಿಕ ಬೆಳವಣಿಗೆಯ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣಿ ಇಲ್ಲದಿಲ್ಲ.

   ಅಭಿಪ್ರಾಯಗಳು ಭಿನ್ನ. ಆದರೆ ಮನಸ್ಸುಗಳು ಭಿನ್ನ ಇಲ್ಲ. ನಾವೆಲ್ಲಾ ಜನರ ಆಶೀರ್ವಾದದಿಂದಲೇ ಇಲ್ಲಿಗೆ ಬಂದಿದ್ದು. ಜನರ ಬೇಕು, ಬೇಡಿಕೆ, ನೋವು-ನಲಿವುಗಳ ಚಿಂತನೆ ಇಟ್ಟುಕೊಂಡೆ ಕೆಲಸ ಮಾಡಿದ್ದೇವೆ. ಜತೆಗೆ ಜನರ ಬದುಕನ್ನು ಸುಧಾರಿಸಿ ಸರಳೀಕರಣಗೊಳಿಸಲು ಹಲವು ಮಹತ್ವದ ಶಾಸನಗಳನ್ನು ರೂಪಿಸಿದ್ದೇವೆ. ಈ ಶಾಸನಗಳು ದೊಡ್ಡ ಪ್ರಮಾಣದಲ್ಲಿ ಬೇರೆ ಬೇರೆ ಕ್ಷೇತ್ರಗಳ ಅಭಿವೃದ್ಧಿಗೆ ನೆರವಾಗುತ್ತವೆ.

   ನಾವು ರೂಪಿಸಿರುವ ಶಾಸನಗಳು ಕರ್ನಾಟಕದ 2 ರಿಂದ 3 ಕೋಟಿ ಜನರಿಗೆ ಒಂದಲ್ಲಾ ಒಂದು ರೀತಿ ನೆರವಾಗಿವೆ ಎಂದರು.ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಹೆಚ್ಚಿಸುವ ಐತಿಹಾಸಿಕ ನಿರ್ಣಯ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇಡೀ ದೇಶದ ಮೇಲೆ ಈ ತೀರ್ಮಾನ ಪರಿಣಾಮ ಬೀರಲಿದೆ. ಯಾವುದೇ ಒಂದು ದೊಡ್ಡ ಬದಲಾವಣೆ ತರಲು ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ. ಇದರಲ್ಲಿ ನಾವು ಜಯಗಳಿಸುತ್ತೇವೆ ಎಂದು ಹೇಳಿದರು.

    15ನೇ ವಿಧಾನಸಭೆ ಅರ್ಥಪೂರ್ಣ ಯಶಸ್ವಿ ಕಾಣಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪಾತ್ರವೂ ದೊಡ್ಡದಿದೆ. ಹಾಗೆಯೇ ಸಚಿವ ಸಂಪುಟ ಸದಸ್ಯರು ನನ್ನ ಸಹಕಾರ ಕೊಟ್ಟಿದ್ದೇವೆ. ಕೆಲವರು ಅನುಭವದಲ್ಲಿ ನನಗಿಂತ ಹಿರಿಯರು, ಅವರು ಸಹ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ಅವರಿಗೆ ನಾನು ಆಭಾರಿ ಎಂದರು.ಯಡಿಯೂರಪ್ಪನವರ ಸಹಕಾರವನ್ನು ನೆನೆದ ಅವರು, ಯಡಿಯೂರಪ್ಪನವರ ಸಾಧನೆ, ಹೋರಾಟ ಎಲ್ಲವನ್ನೂ ನೆನೆದರು.

   ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹಿರಿತನ, ಅನುಭವ, ಸದನದ ವಿವಿಧ ಸದಸ್ಯರುಗಳ ಕೆಲಸ ಎಲ್ಲವನ್ನೂ ಸ್ಮರಿಸಿದ ಮುಖ್ಯಮಂತ್ರಿಗಳು ಮತ್ತೆ ಎಲ್ಲರೂ ಗೆದ್ದು ಬರೋಣ, ಎಲ್ಲರಿಗೂ ಶುಭಾಶಯ ಎಂದು ಹೇಳಿ ಮಾತು ಮುಗಿಸಿದರು.

  ವಿದಾಯ ಭಾಷಣವನ್ನು ಮೊದಲು ಆರಂಭಿಸಿದ ಮಾಧುಸ್ವಾಮಿ ಅವರು, 15ನೇ ಅಧಿವೇಶನದ ಅಂತಿಮ ಕ್ಷಣದಲ್ಲಿ ನಾವು ನಿಂತಿದ್ದೇವೆ. ಈ ಮನೆಗೆ ಬರಲು ದೊಡ್ಡ ಹೋರಾಟ ಮಾಡಿ ಗರ್ಭಗುಡಿಯಲ್ಲಿ ನಾವೆಲ್ಲ ಇದ್ದೇವೆ. ಇಲ್ಲಿಗೆ ಬರಲು ತನು, ಮನದಿಂದ ದುಡಿದಿದ್ದೇವೆ. ಜನರ ಕೈಕಾಲು ಕಟ್ಟಿ ಅವರಿಂದ ಬೈಸಿಕೊಂಡು ಮನಗೆದ್ದು ಇಲ್ಲಿಗೆ ಬಂದಿದ್ದೇವೆ.

    ಬದುಕು ಅವಕಾಶಗಳ ಹೂರಣ. ನಮ್ಮನ್ನು ಗುರುತಿಸಲು, ಗೌರವಿಸಲು ಸಾಧನೆ ಮಾಡಬೇಕು ಎಂದು ಮನೆ ಕಡೆ ಚಿಂತೆ ಮರೆತು, ವೈಯುಕ್ತಿಕ ಜೀವನವನ್ನು ಬಿಟ್ಟು ಕಷ್ಟ ಬಂದಾಗ ಭಗವಂತನು ಇದ್ದಾನೆ ಎಂಬಂತೆ ಜನರ ಸೇವೆ ಮಾಡುವ ಅವಕಾಶ ಸೃಷ್ಠಿಸಿಕೊಂಡು ಸಮಾಧಾನ, ನೆಮ್ಮದಿ ಕಂಡುಕೊAಡಿದ್ದೇವೆ. ನಾವು ಇಲ್ಲಿ ಏನೇ ಮಾಡಿದ್ದರೂ ಅದು ಜನರ ಹಿತಾಸಕ್ತಿ ಹಾಗೂ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಕರ್ತವ್ಯಗಳನ್ನು ಮಾಡಿದ್ದೇವೆ.

    ಈ ಸದನದ ಎಂದರೆ ಚರ್ಚೆ. ಈ ಚರ್ಚೆಯಲ್ಲಿ ಬೆಣ್ಣೆ ಆಚೆ ಬರಬೇಕು. ಆ ಬೆಣ್ಣೆ ಜನರ ಒಳಿತಿಗೆ ಉಪಯೋಗವಾಗಬೇಕು ಎಂಬ ರೀತಿಯಲ್ಲಿ ಬಹಳ ಚರ್ಚೆ ಮಾಡಿದ್ದೇವೆ. ನಮ್ಮಲ್ಲಿ ವೈಯುಕ್ತಿಕವಾಗಿ ಏನೂ ಇಲ್ಲ. ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವಾಗ ಮನುಷ್ಯರಲ್ಲಿ ಸಹಜ ಎಂಬಂತೆ ಸಿಟ್ಟು, ಆವೇಶಗಳು ವ್ಯಕ್ತವಾಗಿರಬಹುದು.

    ನಾವು ರಾಜಕಾರಣದಲ್ಲಿ ಸೋಲು-ಗೆಲುವು ಎಲ್ಲವನ್ನು ನೋಡಿದ್ದೇವೆ. ಸದನದ ಮೂಲಕ ನಮ್ಮ ಕರ್ತವ್ಯಗಳನ್ನು ಮಾಡಿದ್ದೇವೆ ಸಂತೃಪ್ತ ಭಾವನೆ ನಮ್ಮಲ್ಲಿದೆ. ಸಭಾಧ್ಯಕ್ಷರು, ಮುಖ್ಯಮಂತ್ರಿಗಳು ಎಲ್ಲರೂ ನಮಗೆ ಸಹಕಾರಗಳನ್ನು ಕೊಟ್ಟಿದ್ದಾರೆ. ಹಿರಿಯರಾದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡಿದೆ ಎಂಬ ತೃಪ್ತಿ ಇದೆ. ಜನರ ಜೀವನ ಸರಳೀಕರಣಕ್ಕಾಗಿ ಕಾನೂನುಗಳನ್ನು ಮಾಡಿದ್ದೇವೆ. ಅನಗತ್ಯ ಕಾನೂನುಗಳನ್ನು ತೆಗೆದು ಹಾಕಿದ್ದೇವೆ. ಈ 5 ವರ್ಷದಲ್ಲಿ ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ ಎಂದು ಅವರು ಹೇಳಿದರು.

    ಕಾಂಗ್ರೆಸ್‌ನ ಯು.ಟಿ. ಖಾದರ್, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್, ಹೆಚ್.ಕೆ. ಕುಮಾರಸ್ವಾಮಿ, ಸಾ.ರಾ. ಮಹೇಶ್ ಸೇರಿದಂತೆ ಹಲವು ಸದಸ್ಯರುಗಳು ವಿದಾಯ ಭಾಷಣದಲ್ಲಿ ಮಾತನಾಡಿದ್ದು, ಕೊನೆಯದಾಗಿ ಸಭಾಧ್ಯಕ್ಷರು ತಮ್ಮ ವಿದಾಯ ಭಾಷಣದಲ್ಲಿ ಎಲ್ಲರ ಸಹಕಾರ ನೆನೆದು ಶುಭ ಹಾರೈಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap