ಬಿಜೆಪಿಗೆ ತಲೆನೋವಾದ ಟಿಕೆಟ್‌ ಹಂಚಿಕೆ…..!

ಬೆಂಗಳೂರು :

   ವಿಧಾನಸಭಾ ಚುನಾವಣೆಯಲ್ಲಿ ಇಂತಹವರಿಗೆ ಟಿಕೆಟ್ ನೀಡಬೇಕು ಎಂದು ರಾಜ್ಯ ಬಿಜೆಪಿಯ ಚುನಾವಣಾ ಸಮಿತಿ ಶಿಫಾರಸು ಮಾಡಿದ ಹೆಸರುಗಳ ಪೈಕಿ 32 ಮಂದಿಗೆ ಕೊಕ್ ನೀಡಲು ವರಿಷ್ಠರು ನಿರ್ಧರಿಸಿದ್ದು, ಈ ಅಂಶವೇ ಕರ್ನಾಟಕದ ಬಿಜೆಪಿ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

   ಈ ಮಧ್ಯೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಸನ್ನಿ ಬಿಜೆಪಿಯಲ್ಲಿ ಶುರುವಾಗಿದ್ದು, ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

    ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ಬಯಸಿದ್ದ ಈಶ್ವರಪ್ಪ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಪತ್ರ ಬರೆದು, ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಬಯಸುವುದಿಲ್ಲ. ನನ್ನ ಹೆಸರನ್ನು ಟಿಕೆಟ್‌ಗಾಗಿ ಪರಿಗಣಿಸಬಾರದು ಎಂದು ಕೋರಿಕೊಂಡಿದ್ದಾರೆ. ಹೀಗೆ ಚುನಾವಣಾ ಕಣದಿಂದ ಹಿಂದೆ ಸರಿಯುವ ಸನ್ನಿ ಬಿಜೆಪಿಯಲ್ಲಿ ಪ್ರಾರಂಭವಾಗಿದ್ದು, ಇದುವರೆಗೆ ಪಕ್ಷದ ನಾಲ್ಕು ಮಂದಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ತಮ್ಮ ನಿವೃತ್ತಿ ತೀರ್ಮಾನವನ್ನು ಪ್ರಕಟಿಸಿದ್ದು, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಸ್ಪರ್ಧೆಯ ಕಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಸಹ ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ತಮ್ಮ ನಿರ್ಧಾರವನ್ನು ಬಹಿರಂಗಗೊಳಿಸಿದ್ದಾರೆ.

    ಉನ್ನತ ಮೂಲಗಳ ಪ್ರಕಾರ, ಇನ್ನೂ ಹಲವು ನಾಯಕರು ಚುನಾವಣೆಯ ಕಣದಿಂದ ಹಿಂದೆ ಸರಿಯುವ ಲಕ್ಷಣಗಳಿದ್ದು ಚುನಾವಣೆಯ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾದರೆ ಬಹುತೇಕರು ಇಂತಹ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ದೆಹಲಿಯ ಉನ್ನತ ಮೂಲಗಳ ಪ್ರಕಾರ, ಬಿಜೆಪಿಯ ರಾಜ್ಯ ಚುನಾವಣಾ ಸಮಿತಿ ಟಿಕೆಟ್‌ಗಾಗಿ ಶಿಫಾರಸು ಮಾಡಿರುವ ಹೆಸರುಗಳ ಪೈಕಿ ಮೂವತ್ತೆರಡು ಮಂದಿಗೆ ಟಿಕೆಟ್ ನೀಡಲು ವರಿಷ್ಠರು ನಕಾರ ವ್ಯಕ್ತಪಡಿಸಿದ್ದಾರೆ.

   ಸಿಡಿ ಹಗರಣದಲ್ಲಿ ಸಿಲುಕಿದವರು, ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾದವರು, ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಕಳೆದುಕೊಂಡವರು, ಎಪ್ಪತ್ತೆöÊದು ವರ್ಷ ಮೀರಿದವರು ಈ ಪಟ್ಟಿಯಲ್ಲಿದ್ದಾರೆ ಎಂದು ಈ ಮೂಲಗಳು ಸ್ಪಷ್ಟಪಡಿಸಿವೆ. ಇದರಲ್ಲಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದ ಇಬ್ಬರು ಸಚಿವರೂ ಇದ್ದು, ಈ ಪೈಕಿ ಒಬ್ಬರಿಗೆ ಟಿಕೆಟ್ ಕೊಡಬೇಕು ಎಂದು ಮುಖ್ಯಮಂತ್ರಿ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.

    ಹೀಗೆ ಟಿಕೆಟ್ ನಿರಾಕರಣೆಗೊಲಗಾದವರ ಪೈಕಿ ಎಂಟು ಮಂದಿಗೆ ಟಿಕೆಟ್ ಕೊಡಲೇಬೇಕು, ಇಲ್ಲದಿದ್ದರೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಾಗಬಹುದು ಎಂದು ಬಸವರಾಜ ಬೊಮ್ಮಾಯಿ ಅವರು ವರಿಷ್ಠರಿಗೆ ಹೇಳಿದ್ದಾರೆ ಎನ್ನಲಾಗಿದೆ. ಇದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಟಿಕೆಟ್ ನಿರಾಕರಣೆಯಾದವರ ಪೈಕಿ ಐದು ಮಂದಿಗೆ ಟಿಕೆಟ್ ನೀಡಲೇಬೇಕು ಎಂದು ವರಿಷ್ಠರ ಬಳಿ ಹೇಳಿದ್ದು, ಹೀಗೆ ಉಳಿಸಲು ನಡೆಯುತ್ತಿರುವ ಪ್ರಯತ್ನಗಳು ಎಷ್ಟು ಮಂದಿಯ ತಲೆದಂಡವನ್ನು ತಪ್ಪಿಸುತ್ತವೆ ಎಂಬುದನ್ನು ಕಾದು ನೋಡಬೇಕು.

    ಈ ಮಧ್ಯೆ ಬಿಜೆಪಿಯ ಪಟ್ಟಿ ಹೊರಬಂದರೆ ಬಂಡಾಯದ ಬಿಸಿ ತೀವ್ರವಾಗಲಿದ್ದು, ಈ ಬಿಸಿಯಲ್ಲಿ ಮೈ-ಕೈ ಕಾಯಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕಾದು ಕುಳಿತಿದ್ದಾರೆ. ತಾವು ಗೆಲ್ಲುವುದು ಕಷ್ಟ ಎಂದು ಗುರುತಿಸಿರುವ ಕ್ಷೇತ್ರಗಳಿಗೆ ಬಿಜೆಪಿಯ ಟಿಕೆಟ್ ವಂಚಿತರು ದಕ್ಕಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿದ್ದು, ಇದೇ ಕಾರಣಕ್ಕಾಗಿ ತಮ್ಮ ಮುಂದಿನ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಎರಡೂ ಪಕ್ಷಗಳು ಬಿಡುಗಡೆ ಮಾಡಿಲ್ಲ.

    ಈ ಅಂಶವನ್ನು ಗಮನಿಸಿರುವ ಬಿಜೆಪಿ, ಟಿಕೆಟ್ ಹಂಚಿಕೆಗೂ ಮುನ್ನವೇ ಭುಗಿಲೇಳಬಹುದಾದ ಬಂಡಾಯವನ್ನು ನಿರೀಕ್ಷಿಸಿ, ಅತೃಪ್ತರನ್ನು ಸಮಾಧಾನಿಸುವ ಇಲ್ಲವೇ ಎಚ್ಚರಿಕೆ ನೀಡುವ ಕೆಲಸವನ್ನು ಪ್ರಾರಂಭ ಮಾಡಿದೆ. ಟಿಕೆಟ್ ಹಂಚಿಕೆಯ ನಂತರದ ಬಿಸಿಯನ್ನು ಈಗಲೇ ತಣ್ಣಗೆ ಮಾಡಿದರೆ ಮುಂದಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ಎಂಬುದು ಬಿಜೆಪಿ ನಾಯಕರ ಯೋಚನೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap