ಮೀಸಲಾತಿ ಹೆಸರಿನಲ್ಲಿ ಬಿಜೆಪಿಯಿಂದ ವಂಚನೆ : ಕಾಂಗ್ರೆಸ್‌ ಆರೋಪ

ಬೆಂಗಳೂರು

     420 ಬೊಮ್ಮಾಯಿ ಸರ್ಕಾರದಿಂದ ಮೀಸಲಾತಿ ವಿಚಾರದಲ್ಲಿ ರಾಜ್ಯದ ಜನರಿಗೆ ವಂಚನೆಯಾಗಿದ್ದು, ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ಮೋಸ ಮಾಡುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

     ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಡಗು ಸೋಲಿನ ಸುಳಿಗೆ ಸಿಲುಕಲಿರುವುದನ್ನು ಅರಿತ ಬಿಜೆಪಿ ಸರ್ಕಾರ ಈಗ ರಾಜ್ಯದ ಬಹುತೇಕ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ದ್ರೋಹ, ವಂಚನೆ, ಮೋಸ ಮಾಡುವ ರಣನೀತಿ ರೂಪಿಸಿದೆ ಎಂದು ದೂರಿದೆ.

    75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮಿಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಾವಣೆ ಮಾಡಿರಲಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ ಎಲ್ಲರನ್ನು ವಂಚಿಸಿ, ಎಲ್ಲರನ್ನು ಒಡೆದು, ಎಲ್ಲ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ.

     ಈ ರೀತಿ ಮಾಡಿದಾಗ ಮೀಸಲಾತಿ ಬೇಡಿಕೆ ವಿಚಾರವಾಗಿ ಕೂಗು ಹೆಚ್ಚಾಗಿ ಜನರು ಈ ಸರ್ಕಾರದ ಲೂಟಿ, ಹಗರಣಗಳನ್ನು ಮರೆಸುವಂತೆ ಮಾಡುತ್ತದೆ. ಆ ಮೂಲಕ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಕಳಂಕದಿAದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಎಲ್ಲದರಿಂದಾಗಿ ಬಿಜೆಪಿ ಇದೀಗ ದ್ರೋಹ ಬಗೆಯುವ ಜನತಾ ಪಕ್ಷವಾಗಿದೆ.

    ಕಳೆದ 90 ದಿನಗಳಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಿಸಿದೆ. ಇದು ವಿವಿಧ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಚುನಾವಣಾ ಸಮಯದಲ್ಲಿ ಮಾಡುತ್ತಿರುವ ಅಪ್ರಮಾಣಿಕತೆ ಹಾಗೂ ವಂಚನೆಗೆ ಸಾಕ್ಷಿಯಾಗಿದೆ. ಸಮಾಜದಲ್ಲಿ ಸಮುದಾಯಗಳ ನಡುವೆ ಜನರು ಪರಸ್ಪರ ಕಚ್ಚಾಡುವಂತೆ ಮಾಡಿ, ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ವಿಚಾರವಾಗಿ ನಾಗಮೋಹನ್ ದಾಸ್ ಸಮಿತಿಯು ವರದಿ ನೀಡಿ ನಾಲ್ಕು ವರ್ಷವಾದರೂ ಇದನ್ನು ಜಾರಿಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಲಿಲ್ಲ ಎಂದು ಆರೋಪಿಸಿದರು.

   ಕಳೆದ 2022 ರ ಡಿಸೆಂಬರ್ 26 ರಂದು ಬೊಮ್ಮಾಯಿ ಸರ್ಕಾರ ಬಲವಂತವಾಗಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸಿ ಕಾನೂನು ಜಾರಿಗೊಳಿಸಲಾಯಿತು. ಇದರೊಂದಿಗೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ವಿಸ್ತರಣೆಯಾಯಿತು. ಈ ಕಾನೂನು ಮಾನ್ಯತೆ ಪಡೆಯಬೇಕಾದರೆ ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು. ಅಥವಾ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಬೇಕು. ಇದ್ಯಾವುದನ್ನು ಮಾಡಿಲ್ಲ. ಮತ್ತೊಂದೆಡೆ ಈ ಮೀಸಲಾತಿ ಏರಿಕೆ ಸರ್ಕಾರದ ನಿರ್ಧಾರವನ್ನು ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

   ಮಾರ್ಚ್ 24 ರಂದು ಬಿಜೆಪಿ ಸರ್ಕಾರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ತನ್ನ ಕೊನೆಯ ಸಚಿವ ಸಂಪುಟದಲ್ಲಿ ಮಗದೊಮ್ಮೆ ಮೀಸಲಾತಿ ವರ್ಗೀಕರಣ ಬದಲಿಸಿದೆ. ಆ ಮೂಲಕ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಕ್ಕೆ ಮುಂದಾಗಿದೆ.

   ಪಂಚಮಸಾಲಿ ಲಂಗಾಯತ ಸಮುದಾಯ ತಮ್ಮ ಮೀಸಲಾತಿ ಪ್ರಮಾಣವನ್ನು ಶೇ.15ಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸುತ್ತಿತ್ತು. ಆದರೆ ಕೇವಲ ಶೇ. 2ರಷ್ಟು ಮಾತ್ರ ಏರಿಕೆ ಮಾಡಿದೆ. ಇದಕ್ಕೆ ಈ ಸಮುದಾಯದ ನಾಯಕರು ಹಾಗೂ ಸ್ವಾಮೀಜಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಒಕ್ಕಲಿಗ ಸಮುದಾಯವು ಶೇ.12ರಷ್ಟು ಮೀಸಲಾತಿಗೆ ಆಗ್ರಹಿಸಿತ್ತು, ಆದರೆ ಬೊಮ್ಮಾಯಿ ಸರ್ಕಾರ ಕೊಟ್ಟಿದ್ದು ಕೇವಲ ಶೇ.2ರಷ್ಟು ಮಾತ್ರ ಎಂದು ಹೇಳಿದೆ.

  ದಶಕಗಳಷ್ಟು ಹಳೆಯದಾದ ಮುಸಲ್ಮಾನರ ಶೇ.4ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ಕಸಿಯಲಾಗಿದೆ. ಇದರಿಂದ ಅಲ್ಪಸಖ್ಯಾತ ಸಮುದಾಯಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗಿದೆ. ಇನ್ನು ಮಾರ್ಚ್ 14 ರಂದು ಮೋದಿ ಸರ್ಕಾರ ಸಂಸತ್ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ಮೀಸಲಾತಿ ಹೆಚ್ಚಳದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಬಿಜೆಪಿ ಮಾಡಿರುವ ಮಹಾದ್ರೋಹಕ್ಕೆ ದಲಿತ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

   ಆ ಮೂಲಕ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳ ಮೀಸಲಾತಿ ಪ್ರಸ್ತಾವನೆ ತಿರಸ್ಕಾರದಿಂದ ನಿರಾಸೆಗೊಂಡಿವೆ. ಇದು ಬೊಮ್ಮಾಯಿ ಅವರ ಸರ್ಕಾರ ಸಮುದಾಯಗಳ ನಡುವೆ ಕಿಚ್ಚು ಹಚ್ಚುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಬೊಮ್ಮಾಯಿ ಸರ್ಕಾರ ಪದೇ ಪದೇ ಮೀಸಲಾತಿ ವರ್ಗೀಕರಣ ಮಾಡಿದರೂ ಇದ್ಯಾವುದೂ ಸಾಂವಿಧಾನಿಕ ಮಾನ್ಯತೆ ಪಡೆದಿಲ್ಲ. ಆಮೂಲಕ ಈ ಮೀಸಲಾತಿಗಳು ಊರ್ಜಿತವಾಗುವುದಿಲ್ಲ. ಹೀಗಾಗಿ ಬೊಮ್ಮಾಯಿ ಅವರ ಸರ್ಕಾರ ಈ ವಿಚಾರದಲ್ಲಿ ಜನರಿಗೆ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿದೆ. ಸದ್ಯ ಸುಪ್ರೀ ಕೋರ್ಟ್ ಇಂದಿರಾ ಶೆಣೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಮಿತಿಯನ್ನು ಶೇ.50ಕ್ಕೆ ನಿಗದಿಗೊಳಿಸಿದೆ.

   ಆದರೆ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಏರಿಕೆಯಾಗಿದೆ. ಈ ಶೇ.56ರಷ್ಟು ಮೀಸಲಾತಿಯನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ?. ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸದೇ ತನ್ನ ಅಂತಿಮ ವರದಿ ನೀಡಿದೆ. ಬಿಜೆಪಿ ಸರ್ಕಾರ ಬೇಕಂತಲೇ ಸಮೀಕ್ಷೆ ನಡೆಸದೇ ವರದಿ ಸಿದ್ಧಪಡಿಸಿಕೊಂಡಿದೆ. ಆಮೂಲಕ ಮೀಸಲಾತಿ ವಿಚಾರ ಇತ್ಯರ್ಥವಾಗದಿರಲಿ ಎಂದು ತೀರ್ಮಾನಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಮೀಸಲಾತಿಯ ಲಾಭ ಪಡೆಯುವುದಾದರೂ ಹೇಗೆ? ಎಂದು ಪ್ರಶ್ನಿಸಿದೆ.

   ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಲು ಹಾಗೂ ಮೀಸಲು ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಲು ಮೋದಿ ಸರ್ಕಾರ ನಿರಾಕರಿಸಿದೆ. ಇನ್ನು ರಾಜ್ಯದ ಮೀಸಲಾತಿ ಹೆಚ್ಚಳದ ಕಾನೂನನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಲು ನಿರಾಕರಿಸಿದೆ. ಈ ಪರಿಸ್ಥಿತಿಯಲ್ಲಿ ಈ ಸಮುದಾಯಗಳು ಸರ್ಕಾರದ ಮೀಸಲಾತಿ ಹೆಚ್ಚಳದ ತೀರ್ಮಾನದಿಂದ ಹೇಗೆ ಪ್ರಯೋಜನ ಪಡೆಯಲಿವೆ?

   ಬೊಮ್ಮಾಯಿ ಸರ್ಕಾರ ಮುಸಲ್ಮಾನ ಅಲ್ಪಸಂಖ್ಯಾತರ ಮೀಸಲಾತಿಯನ್ನು ಆರ್ಥಿಕ ದುರ್ಬಲ ವರ್ಗಕ್ಕೆ  ನೀಡಲಾಗುವ ಮೀಸಲಾತಿಗೆ ವರ್ಗಾಯಿಸಿರುವುದು ಅಸಂವಿಧಾನಿಕ ಕ್ರಮವಾಗಿದೆ. ಈ ವರ್ಗೀಕರಣದಲ್ಲಿ ಆರ್ಥಿಕ ಸ್ಥಿತಿಗತಿ ಮೇಲೆ ಮೀಸಲಾತಿ ನಿಗದಿಯಾಗುತ್ತದೆಯೇ ಹೊರತು, ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಸಿಗುವುದಿಲ್ಲ.

    ಈ ವರ್ಗೀಕರಣಕ್ಕೆ ಮುಸಲ್ಮಾನರನ್ನು ವರ್ಗಾವಣೆ ಮಾಡದಿದ್ದರೂ ಈ ಸಮುದಾಯದ ಆರ್ಥಿಕವಾಗಿ ಹಿಂದುಳಿದವರು ಈ ವರ್ಗದಲ್ಲಿ ಮೀಸಲಾತಿ ಪಡೆಯಲಿದ್ದಾರೆ. ಆದರೂ ಬೊಮ್ಮಾಯಿ ಅವರು ಈ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗದ ಕೋಟಾಗೆ ಸೇರಿಸುವ ನಾಟಕ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap