ಕಲಬುರಗಿ :
ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ನನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ಕಲಬುರಗಿ ನಗರದ ಭಾರತ್ ಪ್ರೈಡ್ ಅಪಾರ್ಟ್ಮೆಂಟ್‌ನಲ್ಲಿದ್ದ ಮಣಿಕಂಠ್ ರಾಠೋಡ್ ನನ್ನು ಇಂದು ಚೌಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಘಾತವನ್ನು ಕೊಲೆ ಯತ್ನ ಎಂದು ಬಿಂಬಿಸಿದ್ದ ಮಣಿಕಂಠ ರಾಠೋಡ್ ನ ಕಟ್ಟುಕಥೆ ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿತ್ತು. ಇದರ ಬೆನ್ನಲ್ಲೇ ಇಂದು ಮಣಿಕಂಠ ರಾಠೋಡ್ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಪೊಲೀಸರು ಸುದ್ದಿಗೋಷ್ಠಿ ನಡೆಸುವ ಮುನ್ನವೇ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.
ಕಾರು ಅಪಘಾತವನ್ನೇ ಹಲ್ಲೆ ಮಾಡಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದ ಮಣಿಕಂಠ ರಾಠೋಡ್ ಅಸಲಿಯತ್ತು ಬಟಾಬಯಲಾಗಿದೆ. ಹಲ್ಲೆ ಪ್ರಕರಣ ಸಂಬಂಧ ಮಣಿಕಂಠ ರಾಠೋಡ್ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಣಿಕಂಠನ ನೌಟಂಕಿ ಆಟ ಬಯಲಾಗಿದೆ. ಈ ಮೂಲಕ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಕಾರು ಅಪಘಾತದಲ್ಲಿ ಗಾಯಗೊಂಡು ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದರು ಎಂಬುದು ಗೊತ್ತಾಗಿತ್ತು.