ಪ್ರತಿಭಟನಾ ನಿರತ ಮಹಿಳೆಗೆ ಬೆದರಿಕೆ ಹಾಕಿದ ಬಿಜೆಪಿ ನಾಯಕ

ಕೊಲ್ಕತ್ತಾ: 

     ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರೊಬ್ಬರು ಮಹಿಳೆಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಬಂಗಾಳದ ಬಿಜೆಪಿಯ ಹಿರಿಯ ನಾಯಕ ಹಾಗೂ ಖರಗ್‌ಪುರದ ಮಾಜಿ ಸಂಸದ ದಿಲೀಪ್ ಘೋಷ್  ಅವರು ಮಹಿಳಾ ಪ್ರತಿಭಟನಾರರೊಂದಿಗೆ ವಾಗ್ವಾದ ನಡೆಸುವ ವೇಳೆ ಮಹಿಳೆಯೊಬ್ಬರಿಗೆ ಕತ್ತು ಹಿಸುಕುವುದಾಗಿ ಬೆದರಿಕೆ ಹಾಕಿದ್ದು, ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರೊಂದಿಗೆ ಘರ್ಷಣೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಇದನ್ನು ಟೀಕಿಸಿದೆ. ಶುಕ್ರವಾರ ವಾರ್ಡ್ ಸಂಖ್ಯೆ 6 ರಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆಯನ್ನು ಉದ್ಘಾಟಿಸಲು ಘೋಷ್‌ ತೆರಳಿದ್ದರು ಆಗ ಘಟನೆ ನಡೆದಿದೆ.

    ರಸ್ತೆಯನ್ನು ಉದ್ಘಾಟಿಸಲು ತೆರಳಿದ್ದ ದಿಲೀಪ್ ಘೋಷ್ ಅವರನ್ನು ಸ್ಥಳೀಯ ಮಹಿಳೆಯರು ಸುತ್ತುವರೆದು ಪ್ರಶ್ನೆ ಕೇಳಿದ್ದಾರೆ. ಇಷ್ಟು ದಿನ ನೀವು ಎಲ್ಲಿದ್ದಿರಿ? ನೀವು ಸಂಸದರಾಗಿದ್ದಾಗ ನಾವು ನಿಮ್ಮನ್ನು ಒಂದು ದಿನವೂ ನೋಡಿರಲಿಲ್ಲ. ಈಗ, ನಮ್ಮ ಕೌನ್ಸಿಲರ್ ತೃಣಮೂಲದ ಪ್ರದೀಪ್ ಸರ್ಕಾರ್ ಅವರು ರಸ್ತೆ ನಿರ್ಮಿಸಿದ ನಂತರ ನೀವು ಉದ್ಘಾಟಿಸಲು ಬಂದಿದ್ದೀರಿ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಘೋಷ್‌ ನಾನು ಇದನ್ನು ನನ್ನ ಹಣದಿಂದ ನಿರ್ಮಿಸಿದ್ದೇನೆ, ನಿಮ್ಮ ತಂದೆಯ ಹಣದಿಂದಲ್ಲ. ಹೋಗಿ ಪ್ರದೀಪ್ ಸರ್ಕಾರ್ ಅವರನ್ನು ಇದರ ಬಗ್ಗೆ ಕೇಳಿ ಎಂದು ಹೇಳಿದ್ದಾರೆ.

   ಆದರೆ ಮಹಿಳೆಯರು ಸುಮ್ಮನಾಗದೆ, ನಮ್ಮ ತಂದೆಯನು ಏಕೆ ಮಧ್ಯ ತರುತ್ತಿದ್ದೀರಿ, ನೀವೊಬ್ಬ ಮಾಜಿ ಸಂಸದರಾಗಿದ್ದುಕೊಂಡು ಹೀಗೆ ಮಾತನಾಡುವುದು ಸರಿ ಅಲ್ಲ ಎಂದ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ದಿಲೀಪ್‌ ಘೋಷ್‌, ಅವರು ಕಿರುಚಬೇಡಿ ನಾನು ನಿನ್ನ ಕತ್ತು ಹಿಸುಕುತ್ತೇನೆ. ನಾನು ಸಂಸದನಾಗಿದ್ದಾಗ ನನ್ನ MPLAD ನಿಧಿಯಿಂದ ಇದಕ್ಕಾಗಿ ಹಣವನ್ನು ನೀಡಿದ್ದೇನೆ ಎಂದು ಮಹಿಳೆಯರನ್ನು ಅವರು ಬೆದರಿಸಿದ್ದಾರೆ.

   ಅಷ್ಟೇ ಅಲ್ಲದೆ ಪ್ರತಿಭಟನಾಕಾರರನ್ನು ತೃಣಮೂಲ ಕಾಂಗ್ರೆಸ್‌ನ ನಾಯಿಗಳು ಎಂದು ಕರೆದಿದ್ದಾರೆ. ಈ ವಾಗ್ವಾದವು ಆ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು, ಹತ್ತಿರದ ಖರಗ್‌ಪುರ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿತು. ಆ ಹೊತ್ತಿಗೆ, ಮಹಿಳೆಯರು ಅವರ ಕಾರನ್ನು ಸುತ್ತುವರೆದಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್‌ ತೃಣಮೂಲ ಪಕ್ಷವು ಪ್ರತಿಭಟನೆಯನ್ನು ಆಯೋಜಿಸಿದೆ ಎಂದು ಹೇಳಿಕೊಂಡರು. ಇವರು 500 ರೂ.ಗಾಗಿ ಬೊಗಳುವ ನಾಯಿ ಎಂದು ಅವರು ಹೇಳಿದ್ದಾರೆ. 

ನನ್ನ ಅಧಿಕಾರಾವಧಿಯಲ್ಲಿ ಮಂಜೂರಾದ MPLAD ನಿಧಿಯ ಹಣದಿಂದ ಈ ರಸ್ತೆ ನಿರ್ಮಾಣಕ್ಕಾಗಿ ನಾನು ಕೆಲಸ ಮಾಡಿದ್ದೆ. ಅದನ್ನು ಉದ್ಘಾಟಿಸಲು ನಾನು ಅಲ್ಲಿಗೆ ಹೋಗಿದ್ದೆ, ಆದರೆ ಸ್ಥಳೀಯ ಕೌನ್ಸಿಲರ್ ಸೂಚನೆಯ ಮೇರೆಗೆ ಕೆಲವು ಮಹಿಳೆಯರು ಪ್ರತಿಭಟಿಸಲು ಬಂದರು. ಪ್ರದೀಪ್ ಸರ್ಕಾರ್ ಅಧ್ಯಕ್ಷರಾಗಿದ್ದಾಗ ನಾನು ಶಾಸಕನಾಗಿದ್ದೆ. ಈಗಲೂ ಸಹ, ಖರಗ್‌ಪುರ ಪುರಸಭೆಯು ನನ್ನ ಅನೇಕ ಅನುದಾನಿತ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.