ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಬಿಜೆಪಿ ಶಾಸಕ!!

ತುಮಕೂರು :

      ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಬಿ.ಸುರೇಶ್‍ಗೌಡ ರಾಜೀನಾಮೆ ಬೆನ್ನಲ್ಲೇ ಜಿಲ್ಲೆಯ ಮತ್ತೋರ್ವ ಬಿಜೆಪಿ ಶಾಸಕ ಮಸಾಲೆ ಜಯರಾಂ ರಾಜೀನಾಮೆಯ ಮಾತುಗಳನ್ನಾಡಿದ್ದು, ಬಿಜೆಪಿ ಸರಕಾರದಲ್ಲಿ ಶಾಸಕರ ಬಂಡಾಯ ಮತ್ತೆ ಶುರುವಾಗುವ ಲಕ್ಷಣಗಳು ಗೋಚರಿಸಿದೆ.

      ಜಿಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅವರು, ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಆದರೆ ಹಾಲಿ ನೀಡಲಾಗಿರುವ ಸಾಂಬಾರು ಮಂಡಳಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ನಾನು ಸಿದ್ಧನಿಲ್ಲ. ಕಾರಣ ಸದರಿ ಮಂಡಳಿಗೆ ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ. ನಾವೇ ನಿಗಮದ ಸಿಬ್ಬಂದಿಗೆ ಸ್ವಂತ ಖರ್ಚಿನಲ್ಲಿ ಕಾಫಿ ಟೀ ಕೊಡಿಸುವ ಪರಿಸ್ಥಿತಿ ಇದೆ. ಕೊಡುವುದಾದರೆ ಜನಪರ ಕೆಲಸ ಮಾಡುವ ಅವಕಾಶ, ಯೋಜನೆಗಳುಳ್ಳ ಉತ್ತಮ ನಿಗಮ ಮಂಡಳಿ ಕೊಡಲಿ. ಈ ಕುರಿತು ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ, ಹಾಲಿ ಸಿಎಂ ಬಸವರಾಜಬೊಮ್ಮಾಯಿ ಅವರ ಬಳಿಯೂ ಪ್ರಸ್ತಾಪಿಸಿದ್ದು, ಅಕ್ಟೋಬರ್ ಅಂತ್ಯದವರೆಗೆ ಕಾದು ನೋಡುತ್ತೇನೆ. ಮನವಿಗೆ ಸ್ಪಂದಿಸದಿದ್ದಲೂ ನ.1ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿರುವೆ ಎಂದು ಹೇಳಿದರು.

ಅಭಿವೃದ್ಧಿ ಕಾರಣಕ್ಕೆ ಕ್ಷೇತ್ರದ ಜನ ನನ್ನೊಂದಿಗಿದ್ದಾರೆ:

     ಕಳೆದ ಮೂರುವರೆ ವರ್ಷಗಳಲ್ಲಿ ತುರುವೇಕೆರೆ ಕ್ಷೇತ್ರವನ್ನು ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದು, ತಾಲೂಕಿನ ಶೇ.80ರಷ್ಟು ಕೆರೆಗಳನ್ನು ತುಂಬಿಸಿರುವೆ. ಸಿ.ಎಸ್.ಪುರ ಕೆರೆ ಸೇರಿದಂತೆ ತಾಲೂಕಿನ ಹಲವು ಕೆರೆಗಳನ್ನು ತುಂಬಿಸುವ ವಿಚಾರದಲ್ಲಿ ಮಾಧುಸ್ವಾಮಿ ಅವರು ನೀಡಿದ ಸಹಕಾರ ಅಭಿನಂದನೀಯ. ಕ್ಷೇತ್ರದ ಜನ ನನ್ನೊಂದಿಗಿದ್ದಾರೆ. ಹಾಲಿ-ಮಾಜಿ ಮುಖ್ಯಮಂತ್ರಿಗಳು ನೀಡಿರುವ ಭರವಸೆಯಂತೆ ಒಳ್ಳೆಯ ನಿಗಮ ಮಂಡಳಿ ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ. ರಾಜಕಾರಣದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆಯೂ ಚಿಂತಿಸುತ್ತಿದ್ದೇನೆ ಎಂದು ಹೇಳಿ ಕುತೂಹಲ ಮೂಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap