ಮುಂಬೈ:
ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ. 288 ಸೀಟುಗಳ ಪೈಕಿ ಆಡಳಿತರೂಢ ಮೈತ್ರಿಕೂಟ ಬರೋಬ್ಬರಿ 217 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ವಿಪಕ್ಷಗಳ ಮಹಾ ವಿಕಾಸ್ ಅಘಾಡಿ ಒಕ್ಕೂಟ ಕೇವಲ 58 ಕಡೆಗಳಲ್ಲಿ ಮುಂದಿದ್ದು, ಇತರರು 10 ಕಡೆ ಮುನ್ನಡೆ ಸಾಧಿಸಿದ್ದಾರೆ .
ಮಹಾಯುತಿ ಒಕ್ಕೂಟದ ಪೈಕಿ ಬಿಜೆಪಿ 115, ಶಿವಸೇನೆ (ಎಸ್‌ಎಚ್‌ಎಸ್) 56 ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ 34 ಕಡೆ ಮುನ್ನಡೆಯಲ್ಲಿದೆ. ಇನ್ನು ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪೈಕಿ ಶಿವ ಸೇನೆ (ಯುಬಿಟಿ ಬಣ) 20, ಕಾಂಗ್ರೆಸ್ 11, ಎನ್‌ಸಿಪಿ (ಎಸ್‌ಪಿ ಬಣ) 2 ಮತ್ತು ಸಮಾಜವಾದಿ ಪಾರ್ಟಿ 2 ಕಡೆಗಳಲ್ಲಿ ಮುನ್ನಡೆ ಸಾಧಿಸಿವೆ. ಬಹತೇಕ ಸಮೀಕ್ಷೆಗಳು ಮಹಾಯುತಿ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದೇ ಭವಿಷ್ಯ ನುಡಿದಿದ್ದವು. ಅದಾಗ್ಯೂ ಯಾವುದೇ ಸಮೀಕ್ಷೆಗಳು ಇಷ್ಟೊಂದು ಸೀಟು ದೊರೆಯಲಿದೆ ಎಂದು ಊಹಿಸಿರಲಿಲ್ಲ. ಈ ಮೂಲಕ ಪ್ರಚಂಡ ಗೆಲುವುನತ್ತ ದಾಪುಗಾಲು ಹಾಕಿದೆ. ಪಿ-ಎಂಎಆರ್‌ಕ್ಯು (P-MARQ) ಸಮೀಕ್ಷೆಯಲ್ಲಿ ಮಹಾಯುತಿ ಸರ್ಕಾರ 137-157 ಕಡೆ ಜಯ ಗಳಿಸಿದರೆ, ಮಹಾ ವಿಕಾಸ ಅಘಾಡಿ 126-147 ಸೀಟು ಗಳಿಸಲಿದೆ. ಇತರರು 2-8 ಕಡೆ ಜಯ ದಾಖಲಿಸಬಹುದು ಎಂದು ಹೇಳಿತ್ತು.
ಮ್ಯಾಟ್ರಿಝ್ ಸಮೀಕ್ಷೆ ಮಹಾಯುತಿಗೆ 150-170 ಮತ್ತು ಎಂವಿಎಗೆ 110-130 ಕ್ಷೇತ್ರ ಎಂದಿತ್ತು. ಇತರರಿಗೆ 8-10 ಸೀಟು ದೊರೆಯುವ ಸಾಧ್ಯತೆ ಎಂದು ಹೇಳಿತ್ತು. ಚಾಣಕ್ಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಮಹಾಯುತಿಗೆ 152-160 ಮತ್ತು ಎಂವಿಎಗೆ 130-138 ಸೀಟು ದೊರೆಯಲಿದೆ ಎಂದು ನುಡಿದಿತ್ತು. ಮಹಾಯುತಿ 175-195 ಕಡೆ ವಿಜಯ ಪತಾಕೆ ಹಾರಿಸುವ ಮೂಲಕ ಭರ್ಜರಿ ಜಯ ದಾಖಲಿಸಿದರೆ, ಮಹಾ ವಿಕಾಸ್ ಅಘಾಡಿ 85-112 ಸೀಟಿಗೆ ಸೀಮಿತಗೊಳ್ಳಲಿದೆ ಎಂದು ಪೀಪಲ್ಸ್ ಪಲ್ಸ್ ಭವಿಷ್ಯ ನುಡಿದಿತ್ತು. ಮಹಾರಾಷ್ಟ್ರದಲ್ಲಿ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್ ನಂಬರ್ 145.
