ಬೆಂಗಳೂರು:
ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳ ಹಿಡಿದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ಜಿಹಾದಿಗಳ ರಾಜ್ಯವಾಗಿದ್ದು, ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಹಿಂದಿನ ಸರಕಾರಕ್ಕೆ ಹೋಲಿಸಿದರೆ ಕೊಲೆಗಳ ಸಂಖ್ಯೆ ಶೇ.31, ಡಕಾಯಿತಿಗಳ ಸಂಖ್ಯೆ ಶೇ.41 ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ 17,000 ಸೈಬರ್ ಕ್ರೈಂ ಪ್ರಕರಣಗಳು ವರದಿಯಾಗಿದ್ದು, ಸರಾಸರಿ 1 ಕೋಟಿ ರೂ.ನಷ್ಟವಾಗಿದೆ. ಕಳೆದ ಒಂದು ವರ್ಷದಲ್ಲಿ, 1.8 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 40 ಪ್ರತಿಶತ ಹೆಚ್ಚಾಗಿದೆ. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಡಿಜೆ ಹಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿದೆ. ತನಿಖೆ ಆರಂಭವಾಗುವ ಮುನ್ನವೇ ಕುಕ್ಕರ್ ಬಾಂಬ್ ಪ್ರಕರಣದ ಆರೋಪಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಉಳಿಸಲು ಪ್ರಯತ್ನಿಸುತ್ತಿದೆ.
ರಾಜ್ಯದಲ್ಲಿ ‘ಸ್ಕ್ವೇರ್‌ಫೀಟ್’ ಎಂಬ ಹೊಸ ‘ತೆರಿಗೆ’ಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಕಿದ್ದು, ಈ ಮೂಲಕ ಬಿಲ್ಡರ್‌ಗಳಿಂದ ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದ್ದಾರೆ. ಸರ್ಕಾರದ ದಿವಾಳಿತನಕ್ಕೆ ಇದು ಸಾಕ್ಷಿಯಾಗಿದೆ.
ಸ್ಕ್ವೇರ್‌ಫೀಟ್’ ಎಂಬ ಪದ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಇದು ಏನೆಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಬಿಲ್ಡರ್‌ಗಳಿಂದ ಸುಲಿಗೆಗಾಗಿ ಬಳಸುತ್ತಿರುವ ‘ಕೋಡ್‌ವರ್ಡ್’ ಅದು. ಹೊಸ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಬಿಲ್ಡರ್‌ಗಳು ಪ್ರತಿ ಚದರಡಿಗೆ ರೂ.100 ರಂತೆ ನೀಡಬೇಕು. ಪ್ರತಿ ಅಪಾರ್ಟ್‌ಮೆಂಟ್‌ಗಳಿಂದಲೂ ತಲಾ ಕನಿಷ್ಠ ರೂ.7 ಕೋಟಿಯಿಂದ ರೂ.10 ಕೋಟಿಯಷ್ಟು ವಸೂಲಿ ಮಾಡುತ್ತಿದ್ದಾರೆ. ಸಾವಿರಾರು ಬಿಲ್ಡರ್‌ಗಳಿಂದ ವಸೂಲಿಗೆ ಇಳಿದಿದ್ದಾರೆಂದು ಆರೋಪಿಸಿದರು.
ಜನರ ಹಣವನ್ನೇ ಸುಲಿಗೆ ಮಾಡಿ ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆಯೇ ಹೊರತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ರಾಹುಲ್ ಗಾಂಧಿಯವರ ಜೇಬಿನಿಂದ ಹಣವನ್ನೇನೂ ಕೊಡುತ್ತಿಲ್ಲ. ಒಬ್ಬ ಗೃಹಣಿಗೆ ರೂ.2,000 ಕೊಡಲು ಆ ಮನೆಯ ಯಜಮಾನನಿಂದ ರೂ.5,000 ಕಸಿದುಕೊಳ್ಳುತ್ತಿದೆ. ಹಾಲು, ಮದ್ಯ, ವಿದ್ಯುತ್ ಶುಲ್ಕದ ದರವನ್ನು ವಿಪರೀತವಾಗಿ ಏರಿಕೆ ಮಾಡಿದೆ. ಜೆಸಿಬಿ ಹಾಕಿ ಬಾಚುವಂತೆ ಜನರಿಂದ ಹಣವನ್ನು ಬಾಚುತ್ತಿದೆ. ಈ ರೀತಿಯಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಚೊಂಬು ಕೊಟ್ಟಿದೆ ಎಂದು ಕಿಡಿಕಾರಿದರು.
ನೇಹಾ ಕೊಲೆ ಕುರಿತು ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್‌ನಲ್ಲಿ ಹಿಂದೂ ಯುವತಿ ಬರ್ಬರ ಕೊಲೆಗೀಡಾಗಿರುವುದನ್ನು ಬಿಜೆಪಿ ಉಗ್ರವಾಗಿ ವಿರೋಧಿಸುತ್ತದೆ. ಕರ್ನಾಟಕವನ್ನು ಡಾನ್‌ಗಳು ನಡೆಸುತ್ತಿರುವಂತಹ ಪರಿಸ್ಥಿತಿ ಇದ್ದು, ಸರ್ಕಾರ ಕಾನೂನನ್ನು ಗೂಂಡಾಗಳಿಗೆ ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಲವ್ ಪ್ರಕರಣ, ಕುಟುಂಬದ ಸಮಸ್ಯೆ ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ಇದು ಲವ್ ಜಿಹಾದ್ ಎಂದು ಯುವತಿಯ ತಂದೆ, ಕಾಂಗ್ರೆಸ್ ಕಾರ್ಪೊರೇಟರ್ ಹೇಳುತ್ತಿದ್ದಾರೆ. ಕುಟುಂಬದವರು ಕಣ್ಣೀರು ಹರಿಸುವಾಗ ಕೊಲೆಯಾದ ಯುವತಿಯ ಬಗ್ಗೆ ಹೀನಾಯವಾಗಿ ಮಾತಾಡುತ್ತಿದ್ದಾರೆ. ಚುನಾವಣೆಯಲ್ಲಿ ಇದು ಚರ್ಚೆಯಾದರೆ ಕಾಂಗ್ರೆಸ್ ಮುಖಕ್ಕೆ ಮಂಗಳಾರತಿಯಾಗಲಿದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯನವರೇ ಈ ರೀತಿ ಮಾತಾಡುತ್ತಿದ್ದಾರೆ. ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತೆ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು.
ಲವ್ ಜಿಹಾದ್ ಮಾಡುವವರಿಗೆ ಪಾಸ್‌ಪೋರ್ಟ್, ಕೊಲೆ, ಗಲಭೆ ಮಾಡುವವರಿಗೆ ವೀಸಾ ನೀಡಲಾಗಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆ ಮಾಡಿದ್ದಕ್ಕೆ ಆ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಶಿವಮೊಗ್ಗದಲ್ಲಿ ಕೋಮು ಗಲಭೆ ನಡೆದಾಗ ಪೊಲೀಸರು ಏನೂ ಮಾಡಲಿಲ್ಲ. ಬಾಂಬ್ ಸ್ಪೋಟವನ್ನು ಸಚಿವರೇ ವ್ಯಾಪಾರದ ವ್ಯಾಜ್ಯ ಎಂದರು. ರಾಮೋತ್ಸವದಲ್ಲಿ ಜೈ ಶ್ರೀರಾಮ್ ಎಂದಾಗ ಮುಸ್ಲಿಮರು ಹಲ್ಲೆ ಮಾಡಿದ್ದರು.
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಮುಸ್ಲಿಮರು ಥಳಿಸಿದ್ದಾರೆ. ಗದಗದಲ್ಲಿ ಒಂದೇ ಕುಟುಂಬದ ಕೊಲೆಯಾಗಿದೆ. ಕುಣಿಗಲ್‌ನಲ್ಲಿ ಬಿಜೆಪಿ ಬೆಂಬಲಿಗನ ತೋಟಕ್ಕೆ ಬೆಂಕಿ ಹಚ್ಚಲಾಗಿದೆ. ಚಿತ್ರನಟಿಯ ಮೇಲೆ ಹಲ್ಲೆ ಮಾಡಲಾಗಿದೆ. ಕೋಲಾರದಲ್ಲಿ ಶ್ರೀರಾಮನ ಫ್ಲೆಕ್ಸ್ ಕಿತ್ತುಹಾಕುವ ಕೆಲಸ ನಡೆದಿದೆ. ಇಷ್ಟಾದರೂ ಸಿಎಂ ಸಿದ್ದರಾಮಯ್ಯ ಏನೂ ಮಾಡಿಲ್ಲ. ಓಲೈಕೆ ರಾಜಕಾರಣ ಪರಾಕಾಷ್ಠೆಗೆ ತಲುಪಿದೆ ಎಂದು ದೂರಿದರು.