ಬೆಂಗಳೂರು:
ದೆಹಲಿಯಲ್ಲಿ ಸತತ ಮೂರು ದಿನಗಳ ಕಾಲ ಮ್ಯಾರಥಾನ್ ಸಭೆಗಳನ್ನು ನಡೆಸಿದ್ದರೂ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇನ್ನೂ ಬಿಡುಗಡೆ ಮಾಡಿಲ್ಲ.
ಸೋಮವಾರ ಬಿಡುಗಡೆ ಮಾಡುವ ನಿರೀಕ್ಷೆಯಿತ್ತು, ಆದರೂ ರಿಲೀಸ್ ಆಗಲಿಲ್ಲ. ಮಂಗಳವಾರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರೆ, ಬುಧವಾರದಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪಟ್ಟಿ ಅಂತಿಮ ಹಂತದಲ್ಲಿದೆ. ನಾವು ಮ್ಯಾರಥಾನ್ ಸಭೆಗಳನ್ನು ನಡೆಸಿದ್ದೇವೆ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆ ಚರ್ಚಿಸಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿಲ್ಲ, ಅವರು ಮಂಗಳವಾರ ಸಂಜೆ ಮರಳುವ ನಿರೀಕ್ಷೆಯಿದೆ. ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ನಂತರ ಪಟ್ಟಿಯನ್ನು ಪ್ರಕಟಿಸುತ್ತೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಆದರೆ, ಮಂಗಳವಾರ ತಡರಾತ್ರಿ ಅಥವಾ ಬುಧವಾರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ದೆಹಲಿಗೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚುನಾವಣೆಯ ಮಾರ್ಗಸೂಚಿಯ ಬಗ್ಗೆಯೂ ಚರ್ಚಿಸಲಾಯಿತು. ಬಿಜೆಪಿ ಕೆಲವು ಮಾರ್ಗಸೂಚಿಗಳನ್ನು ಹೊಂದಿದ್ದು, ಅದರ ಆಧಾರದ ಮೇಲೆ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ ಕಳೆದ 10 ದಿನಗಳಿಂದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮ್ಯಾರಥಾನ್ ಸಭೆಗಳನ್ನು ನಡೆಸಿದೆ. ಅಭ್ಯರ್ಥಿಗಳ ಹೆಸರುಗಳನ್ನು ಫೈನಲ್ ಮಾಡಿ ರಾಜ್ಯ ನಾಯಕರು ಕಳುಹಿಸಿದ್ದಾರೆ, ಸದ್ಯ ಚೆಂಡು ಈಗ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದೆ.
ಇದು ಪ್ರಜಾಪ್ರಭುತ್ವದ ಪ್ರಕ್ರಿಯೆ, ಬೂತ್ ಅಧ್ಯಕ್ಷರಿಂದ ಹಿಡಿದು ಅತ್ಯುನ್ನತ ಸಂಸದೀಯ ಮಂಡಳಿಯ ಅನುಮೋದನೆಯವರೆಗೆ ಸಂಪೂರ್ಣ ಪ್ರಕ್ರಿಯೆಯ ಮೂಲಕ ಸಾಗುತ್ತಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಬೇರೆ ಪಕ್ಷಗಳು ಈಗಾಗಲೇ ತಮ್ಮಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಪ್ರಚಾರ ಆರಂಭಿಸಿದ್ದಾರೆ, ಆದರೆ ಆಡಳಿತಾರೂಢ ಬಿಜೆಪಿ ಇನ್ನೂ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿಲ್ಲ, ಹೆಸರು ಅಂತಿಮಗೊಂಡಿರುವ ಕೆಲವು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ತಮ್ಮ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸಿಎಂ ಅವರಿಂದ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಪಟ್ಟಿ ಬಿಡುಗಡೆಯಲ್ಲಿಆಗುತ್ತಿರುವ ವಿಳಂಬವು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅಡ್ಡಿಯಾಗಬಾರದು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಚುನಾವಣಾ ಸಮಿತಿಯ ಭಾಗವಾಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ್ದರು. ಸೋಮವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಂಗಳವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು.
15ರಿಂದ 20 ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ, ಕೆಲವರಿಗೆ ಟಿಕೆಟ್ ಸಿಗದೇ ಇರಬಹುದು. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಯಡಿಯೂರಪ್ಪ ಹೇಳಿದ್ದಾರೆ.
170 ರಿಂದ 180 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಸಂಜೆಯೊಳಗೆ ಪ್ರಕಟಿಸಲಾಗುವುದು ಎಂದು ಯಡಿಯೂರಪ್ಪ ಈ ಹಿಂದೆ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ. ಯಡಿಯೂರಪ್ಪ ಅವರು ಪಟ್ಟಿಯನ್ನು ಅಂತಿಮಗೊಳಿಸದೆ ಹಿಂತಿರುಗಿದ್ದಾರೆ. ಪಕ್ಷದಲ್ಲಿ ಗೊಂದಲವಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಹೈಕಮಾಂಡ್ ಕೆಲವು ಅಭ್ಯರ್ಥಿಗಳ ಫೇವರ್ ಆಗಿಲ್ಲ ಜೊತೆಗೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ