ಏಪ್ರಿಲ್ ತಿಂಗಳಿಂದ ಹಳದಿ ಮಾರ್ಗ ಆರಂಭ : BMRCL

ಬೆಂಗಳೂರು:

    ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ ದೇಶೀಯವಾಗಿ ತಯಾರಿಸಿದ ಚಾಲಕ ರಹಿತ ರೈಲು ಬೆಂಗಳೂರಿಗೆ ಹೊರಟಿದ್ದು, ಮಾರ್ಚ್ ಅಂತ್ಯದ ವೇಳೆಗೆ ಅಥವಾ ಏಪ್ರಿಲ್ ಆರಂಭದಲ್ಲಿ ಹಳದಿ ಮಾರ್ಗವನ್ನು ಪ್ರಾರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಘೋಷಿಸಿದೆ.

   ಇದು 19.15 ಕಿ.ಮೀ ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗಕ್ಕೆ ಎರಡನೇ ರೈಲು ಆಗಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಮೂರನೆಯದು ನಿರೀಕ್ಷಿಸಲಾಗಿದೆ. ರೈಲುಗಳು ಆರಂಭದಲ್ಲಿ 30-ನಿಮಿಷಗಳ ಅಂತರದಲ್ಲಿ ಸಂಚಾರ ನಡೆಸಲಿವೆ. ಹೆಚ್ಚುವರಿ ರೈಲುಗಳನ್ನು ಪರಿಚಯಿಸುತ್ತಿದ್ದಂತೆ ಇದು ಕಡಿಮೆಯಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಈ ಹಿಂದೆ 2025ರ ಮಧ್ಯದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು BMRCL ನಿರ್ಧರಿಸಿತ್ತು. ಆದರೆ, ಈ ಮಾರ್ಗಕ್ಕೆ ತುಂಬಾ ಬೇಡಿಕೆಯಿರುವುದರಿಂದ ಆದಷ್ಟು ಬೇಗನೆ ಕಾರ್ಯಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

   ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC)ನಿಂದ ಮೊದಲ ಚಾಲಕ ರಹಿತ ರೈಲು ಫೆಬ್ರವರಿ 14, 2024 ರಂದು ಚೆನ್ನೈ ಬಂದರಿನ ಮೂಲಕ ಬೆಂಗಳೂರನ್ನು ತಲುಪಿತ್ತು. ಆದಾಗ್ಯೂ, ಅದರ ಭಾರತೀಯ ಪಾಲುದಾರರಾದ ಟಿಟಾಗಢ ರೈಲ್ ಸಿಸ್ಟಮ್ಸ್ ಮೊದಲ ರೈಲನ್ನು ಕಳುಹಿಸಲು ವಿಫಲವಾದ್ದರಿಂದ ಈ ಮಾರ್ಗದ ಉದ್ಘಾಟನೆ ವಿಳಂಬವಾಗುತ್ತಿದೆ. ಈ ರೈಲು ಜನವರಿ 20 ರೊಳಗೆ ಆಗಮಿಸುವ ನಿರೀಕ್ಷೆಯಿದೆ.

   ರೈಲುಗಳ ನಡುವಿನ ಘರ್ಷಣೆಯ ಸಿಮ್ಯುಲೇಶನ್ ಸೇರಿದಂತೆ ವ್ಯಾಪಕವಾದ ಪರೀಕ್ಷೆಯನ್ನು ನಡೆಸಬೇಕಾಗಿದೆ. ಈ ಪ್ರಕ್ರಿಯೆಯು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಮತ್ತು ಫೆಬ್ರವರಿ ಮೊದಲ ವಾರದೊಳಗೆ ಅದನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಫೆಬ್ರವರಿ ಅಂತ್ಯದ ವೇಳೆಗೆ ಮೂರನೇ ರೈಲನ್ನು ತಲುಪಿಸಲಾಗುವುದು ಎಂದು ಟಿಟಾಗಢ ಭರವಸೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಮಾರ್ಚ್ ಆರಂಭದಲ್ಲಿ ತಪಾಸಣೆಗಾಗಿ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರನ್ನು ಸಂಪರ್ಕಿಸಲು ಯೋಜಿಸುತ್ತಿದ್ದು, ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸುತ್ತೇವೆ, ಲಕ್ನೋ ಮೂಲದ ರೈಲು ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯು ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಪ್ರಮಾಣೀಕರಣವನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

   ಏಪ್ರಿಲ್ ಅಂತ್ಯದ ವೇಳೆಗೆ ಇನ್ನೂ ಎರಡು ರೈಲು ಸೆಟ್‌ಗಳನ್ನು ತಲುಪಿಸುತ್ತೇವೆ. ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಲಿದ್ದು, ಸೆಪ್ಟೆಂಬರ್ 2025 ರ ವೇಳೆಗೆ ತಿಂಗಳಿಗೆ ಎರಡು ರೈಲುಗಳನ್ನು ತಲುಪಿಸುತ್ತದೆ. BMRCL 2019 ರಲ್ಲಿ CRRC ಯೊಂದಿಗೆ 216 ಕೋಚ್‌ಗಳಿಗೆ 1,578 ಕೋಟಿ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿದ್ದು, 12 ಕೋಚ್‌ಗಳನ್ನು ಪಡೆದುಕೊಂಡಿದೆ ಎಂದು ಟಿಟಾಗಢ ಹೇಳಿದೆ.

 

Recent Articles

spot_img

Related Stories

Share via
Copy link