ಬೆಂಗಳೂರು:
ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಕೆಂಗೇರಿ ನಿವಾಸಿ ಮಹೇಶ್ ಹುಕ್ಕಲಿ (42) ಆತ್ಮಹತ್ಯೆಗೆ ಶರಣಾದ ನೌಕರ. ಶಾಂತಿನಗರ ಬಿಎಂಟಿಸಿ ಕೇಂದ್ರ ಕಚೇರಿಯ ಬಿ ಬ್ಲಾಕ್’ನ 3ನೇ ಮಹಡಿಯ ರೆಕಾರ್ಡ್ಸ್ ಕೊಠಡಿಯಲ್ಲಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ.ಮಹೇಶ್ ಕಂಪ್ಯೂಟರ್ ವೈರ್ ಬಳಸಿ ನೇಣು ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹೇಶ್ ಮನೆಗೆ ಹಿಂತಿರುಗದ ಕಾರಣ ಮತ್ತು ಕರೆಗಳಿಗೆ ಪ್ರತಿಕ್ರಿಯಿಸದ ಕಾರಣ, ಮಂಗಳವಾರ ಅವರ ಕುಟುಂಬವು ಕಚೇರಿಯನ್ನು ಸಂಪರ್ಕಿಸಿದೆ. ಈ ವೇಳೆ ಸೋಮವಾರ ರಾತ್ರಿ ಮಹೇಶ್ ಸ್ಟೋರ್ ರೂಂ ಕೀ ಕೇಳಿದ್ದು, ವಾಪಸ್ ಕೊಡಲಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಪರಿಶೀಲಿಸಿದಾಗ ಸ್ಟೋರ್ ರೂಂಗೆ ಒಳಗಿನಿಂದ ಲಾಕ್ ಆಗಿರುವುದು ಹಾಗೂ ಲೈಟ್ ಆನ್ ಆಗಿರುವುದು ಕಂಡು ಬಂದಿದೆ. ನಂತರ ಬಾಗಿಲು ಒಡೆದು ಒಳಗೆ ಬಂದ ಸಿಬ್ಬಂದಿಗೆ ಮಹೇಶ್ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ತಿಳಿದುಬಂದಿದೆ.ಕೌಟುಂಬಿಕ ಸಮಸ್ಯೆಗಳಿಂದ ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
