ನಾಳೆ ಅಥವಾ ನಾಡಿದ್ದು ಚಾರ್ಜ್ ಶೀಟ್ ಸಲ್ಲಿಕೆ: ಪೊಲೀಸ್ ಆಯುಕ್ತರು

ಬೆಂಗಳೂರು:

   ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಗಿಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲು ಸಜ್ಜಾಗಿದ್ದಾರೆ. ಆರೋಪಿಗಳ ಬಂಧನವಾದ 90 ದಿನಗಳ ಒಳಗೆ ನ್ಯಾಯಾಲಯಕ್ಕೆ ಕಡ್ಡಾ ಯವಾಗಿ ಚಾರ್ಜ್ ಶೀಟ್ ಸಲ್ಲಿಸಬೇಕಾಗುತ್ತದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಆರೋಪಿಗಳ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ.

   ಈ ಮಧ್ಯೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿರುವ ನಟ ದರ್ಶನ್ ನ್ನು ಆರೋಪಿ ನಂಬರ್ 1 ಎಂದು ಚಾರ್ಜ್ ಶೀಟ್ ನಲ್ಲಿ ಹೆಸರಿಸಲಾಗುತ್ತದೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಈ ಬಗ್ಗೆ ಇಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಕೇಳಿದಾಗ, ಯಾರು ನಂಬರ್ 1, ನಂಬರ್ 2 ಯಾರು ಎಂದು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸುವುದು ಪೊಲೀಸ್ ಅಧಿಕಾರಿಗಳು ನಾವಲ್ಲ ಎಂದರು. ಬಿಜೆಪಿ ನಾಯಕರು ಸುಖಾಸುಮ್ಮನೆ ಮಾಡುತ್ತಿರುವ ಎಲ್ಲ ಆರೋಪಗಳಿಗೆ ಸರ್ಕಾರ ಸರಿಯಾದ ಪ್ರತ್ಯುತ್ತರ ನೀಡುತ್ತದೆ ಎಂದರು.

   ಪ್ರಕರಣ ಬಗ್ಗೆ ಪೊಲೀಸರು ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ್ದು, ಶೀಘ್ರವೇ ದರ್ಶನ್ ಹಾಗೂ ಇತರೆ ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ‘ಪ್ರಕರಣದಲ್ಲಿ ನಮ್ಮ ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ ಈಗಾಗಲೇ ತಯಾರಾಗಿದೆ. ಆರೋಪ ಪಟ್ಟಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್​ ಅವರಿಗೆ ನೀಡಿ ಸಲಹೆಗಳನ್ನು ಪಡೆಯಲಾಗಿದ್ದು, ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಆ ಬದಲಾವಣೆಗಳ ಬಳಿಕ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.

   ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಇನ್ನೂ ಕೆಲವು ವರದಿಗಳು ಬರಬೇಕಿವೆ. ಬೆಂಗಳೂರಿನ ಎಲ್ಲ ಎಫ್​ಎಸ್​ಎಲ್​ ವರದಿಗಳು ಈಗಾಗಲೇ ಕೈ ಸೇರಿವೆ. ಹೈದರಾಬಾದ್​ನ ಎಫ್​ಎಸ್​ಎಲ್​ನಿಂದ ಕೆಲವು ವರದಿಗಳು ಬರಬೇಕಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಸೇರಿಸುವ ಅವಕಾಶ ಇದೆ. ಈಗ ನಾವು ಪ್ರಾಥಮಿಕ ವರದಿಯನ್ನು ಸಲ್ಲಿಸಲಿದ್ದೇವೆ ಎಂದರು.

Recent Articles

spot_img

Related Stories

Share via
Copy link
Powered by Social Snap