![]()
ಬೆಂಗಳೂರು: ರಾಜ್ಯಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಪ್ರೊ.ಎಂ.ನಾಗರಾಜ್ ಹಾಗೂ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಒಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇತ್ತ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದ ರಾಜ್ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ರಾಜ್ಯ ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಡಾ.ಅಶ್ಚತ್ಥ್ ನಾರಾಯಣ್ ಸೇರಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನೇ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಂತಸ ತಂದಿದೆ. ರಾಜ್ಯಸಭೆಗೆ ಪ್ರೊ.ಎಂ. ನಾಗರಾಜ್ ಅವರನ್ನು ಹಾಗೂ ವಿಧಾನ ಪರಿಷತ್‌ಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಎಲ್ಲಾ ಮುಖಂಡರು ಪಕ್ಷದ ಸಂಘಟನೆಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದ್ದವರು ಎಂದು ಹೇಳಿದರು.
ರಾಜ್ಯಸಭೆ ಅಭ್ಯರ್ಥಿ ಎಂ.ನಾಗರಾಜ್ ಅವರು, ಅತ್ಯಂತ ಹಿಂದುಳಿದ ಕುರುಬ ಸಮಾಜಕ್ಕೆ ಸೇರಿದವರು. ಆರ್‌ಎಸ್‌ಎಸ್ ಮತ್ತು ಎಬಿವಿಪಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಕ್ಷದ ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಕೆಪಿಎಸ್‌ಸಿಯಲ್ಲೂ ಉತ್ತಮ ಸೇವೆ ಸಲ್ಲಿಸಿದ್ದರು ಎಂದರು.
ವಿಧಾನ ಪರಿಷತ್ ಅಭ್ಯರ್ಥಿ ಲಿಂಗರಾಜ ಪಾಟೀಲ್ ಅವರು 37-38 ವರ್ಷಗಳಿಂದ ಸತತವಾಗಿ ಸಂಘಟನೆಯ ವಿವಿಧ ಜವಾಬ್ದಾರಿಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ನಿರ್ವಹಿಸಿದ್ದಾರೆ. ಸಂಘಟನೆಗೆ ಹಗಲು ರಾತ್ರಿ ದುಡಿದಿದ್ದಾರೆ. ಎಬಿವಿಪಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ಇನ್ನು ರಘು ಕೌಟಿಲ್ಯ ಅವರು ಅತ್ಯಂತ ಹಿಂದುಳಿದ ಮಡಿವಾಳ ಸಮಾಜಕ್ಕೆ ಸೇರಿದವರು. ಶಿಕ್ಷಣ ಮತ್ತು ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ಈ ಎಲ್ಲರ ಆಯ್ಕೆ ಸಂತೋಷ ತಂದಿದೆ ಎಂದು ವಿಜಯೇಂದ್ರ ವಿವರಿಸಿದರು.
ಸುಮಲತಾ ಅಂಬರೀಷ್‌ಗೆ ಮುಂದೆ ಸೂಕ್ತ ಸ್ಥಾನಮಾನ: ರಾಜ್ಯಸಭೆಗೆ ಸುಮಲತಾ ಅಂಬರೀಷ್ ಅವರ ಹೆಸರು ಪ್ರಸ್ತಾಪವಾಗಿತ್ತು. ಈ ಹಿಂದೆ ಮಂಡ್ಯದಿAದ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಾಗ ಬಿಜೆಪಿ ಬೆಂಬಲ ನೀಡಿತ್ತು. ಒಳ್ಳೆಯ ಅಂತರದಿAದ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಸುಮಲತಾ ಅವರಿಗೆ ಮುಂದೆ ಸೂಕ್ತ ಸ್ಥಾನಮಾನ ಕೊಡಲಾಗುವುದು ಎಂದರು.
ಜೆಡಿಎಸ್ ಅಭ್ಯರ್ಥಿಯಾಗಿ ಗೋಂವಿAದ ರಾಜ್ ಕಣಕ್ಕೆ: ಕೊನೆ ಕ್ಷಣದ ಬೆಳವಣಿಗೆ ಎಂಬAತೆ ಜೆಡಿಎಸ್ ಗೊಂವಿAದ ರಾಜ್ ಅವರನ್ನು ಪರಿಷತ್‌ನ ಏಳನೇ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕಾಂಗ್ರೆಸ್ ವಿನಯ್ ಕಾರ್ತಿಕ್ ಅವರನ್ನು ಏಳನೇ ಸ್ಥಾನಕ್ಕೆ ಕಣಕ್ಕಿಳಿಸಿದೆ. ಹೀಗಾಗಿ ಏಳನೇ ಸ್ಥಾನಕ್ಕೆ ಜಿದ್ದಾಜಿದ್ದು ಏರ್ಪಟ್ಟಿದೆ. ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಇತ್ತ ಬಿಜೆಪಿ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಏಳನೇ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷೇತರರು ಹಾಗೂ ಇಬ್ಬರು ಉಚ್ಛಾಟಿತ ಬಿಜೆಪಿ ಶಾಸಕರ ಬೆಂಬಲ ಬೇಕಿದೆ.
ಇತ್ತ ಜೆಡಿಎಸ್ ಅಭ್ಯರ್ಥಿಗೆ ಮೂರರಿಂದ ಆರೇಳು ಸ್ಥಾನಗಳ ಕೊರತೆ ಬರಲಿದೆ. ಬಿಜೆಪಿ ತನ್ನ ಎರಡು ಅಭ್ಯರ್ಥಿಗಳಿಗೆ ತಲಾ 29 ಪ್ರಥಮ ಪ್ರಾಶಸ್ತ÷್ಯದ ಮತ ಹಾಕಲಿದೆ. ಬಳಿಕ ಬಿಜೆಪಿಯ 4 ಮತಗಳು ಉಳಿಯಲಿದೆ. ಇತ್ತ 18 ಜೆಡಿಎಸ್ ಮತಗಳು ಇರಲಿದೆ. ಜೆಡಿಎಸ್ ಅಭ್ಯರ್ಥಿಗೆ ಮೈತ್ರಿಯ ಸುಮಾರು 22 ಮತಗಳು ಬೀಳಲಿದ್ದು, ಆರು ಮತಗಳು ಕೊರತೆಯಾಗಲಿದೆ.
ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಅವಕಾಶ : ಬಿವೈವಿ
ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಹೆಸರು ಪ್ರಸ್ತಾಪ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಗೌಡರು ಮೋದಿ ಅವರ ಕೈ ಬಲಪಡಿಸಿದ್ದಾರೆ. ಎನ್‌ಡಿಎಗೆ ಬೆಂಬಲ ನೀಡಿದ್ದಾರೆ. ಅವರ ಬಗ್ಗೆ ಪಕ್ಷಕ್ಕೆ ಅಪಾರ ಗೌರವ ಇದೆ. ರಾಜ್ಯಸಭೆಗೆ ಅವರನ್ನು ಕಳುಹಿಸುವ ಬಗ್ಗೆ ರಾಜ್ಯಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿರಲಿಲ್ಲ. ಇತ್ತೀಚಿನ ರಾಜಕೀಯ ಸ್ಥಿತಿಗತಿ ನೋಡಿ ಸೂಕ್ತ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.
ಹೆಚ್‌ಡಿಡಿಗೆ ಕೈ ತಪ್ಪಿದ ಟಿಕೆಟ್
ರಾಜ್ಯದಿಂದ ರಾಜ್ಯಸಭೆ ಸ್ಥಾನಕ್ಕೆ ಬಿಜೆಪಿ ಹೆಚ್.ಡಿ.ದೇವೇಗೌಡರಿಗೆ ಟಿಕೆಟ್ ನೀಡದ ಕಾರಣ ಮಾಜಿ ಪ್ರಧಾನಿಗಳ ಸಂಸತ್ ರಾಜಕಾರಣ ಅಂತ್ಯವಾಗಿದೆ. ಒಂದು ಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ಡಿ ಹೆಸರು ಬಲವಾಗಿ ಕೇಳಿ ಬಂದಿತ್ತು. ಬಿಜೆಪಿ ಹೈ ಕಮಾಂಡ್ ಹಿರಿಯ ರಾಜಕಾರಣಿ ಮಾಜಿ ಪ್ರಧಾನಿಗೇ ಮಣೆ ಹಾಕಲಿದೆ ಎಂಬ ಚರ್ಚೆಗಳು ನಡೆದಿತ್ತು. ಇತ್ತ ಜೆಡಿಎಸ್ ಪಾಳಯದಲ್ಲೂ ಇದೇ ವಿಶ್ವಾಸ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿ ಹೈ ಕಮಾಂಡ್ ಪ್ರೊ.ಎಂ.ನಾಗರಾಜ್‌ಗೆ ಟಿಕೆಟ್ ನೀಡುವ ಮೂಲಕ ಲೆಕ್ಕಾಚಾರ ಬದಲಾಗಿದೆ. ಅಲ್ಲಿಗೆ ಹೆಚ್.ಡಿ.ದೇವೇಗೌಡರ ಸುದೀರ್ಘ ಸಂಸತ್ ರಾಜಕಾರಣಕ್ಕೆ ತೆರೆ ಬಿದ್ದಿದೆ.
ವಯಸ್ಸು: ರಾಜ್ಯಸಭೆಗಿಲ್ಲ ಹಿರಿಜೀವ
ಹೆಚ್.ಡಿ.ದೇವೇಗೌಡರನ್ನು ಮತ್ತೊಮ್ಮೆ ರಾಜ್ಯಸಭೆ ಸ್ಥಾನಕ್ಕೆ ಆಯ್ಕೆ ಮಾಡಲು ಬಿಜೆಪಿ ಹೈ ಕಮಾಂಡ್ ಒಲವು ತೋರದೇ ಇರಲು ಪ್ರಮುಖ ಕಾರಣ ವಯಸ್ಸು. ಹೆಚ್.ಡಿ.ದೇವೇಗೌಡರಿಗೆ 94 ವಯಸ್ಸಾಗಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಸಕ್ರಿಯರಾಗಿ ರಾಜ್ಯಸಭೆಯಲ್ಲಿ ಪಾಲ್ಗೊಳ್ಳುವುದು, ದೆಹಲಿ ಓಡಾಟ ಕಷ್ಟ ಸಾಧ್ಯವಾಗಲಿದೆ. ದೇವೇಗೌಡರ ವಯಸ್ಸು ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಬಿಜೆಪಿ ಹೈಕಮಾಂಡ್ ಅವರ ಹೆಸರನ್ನು ಪರಿಗಣಿಸಿಲ್ಲ ರಾಜ್ಯ ಬಿಜೆಪಿ ಮೂಲಗಳು ಖಚಿತ ಪಡಿಸಿವೆ. ಅವರ ವಯಸ್ಸು, ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ಬಿಜೆಪಿ ಹೈ ಕಮಾಂಡ್ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ದೇವೇಗೌಡರು ರಾಜ್ಯಸಭೆ ಸದಸ್ಯ ಆಗಬೇಕು ಎಂದು ಕೇಳಿರಲಿಲ್ಲ. ಸಾರ್ವಜನಿಕರಿಂದ ಒತ್ತಾಯ ಇತ್ತು. ಅವರನ್ನು ಆಯ್ಕೆ ಮಾಡಿದರೆ ರಾಜ್ಯದ ಸಮಸ್ಯೆ ಬಗ್ಗೆ ಸಂಸತ್ ನಲ್ಲಿ ಚರ್ಚಿಸಿ ಬಗೆಹರಿಯುತ್ತದೆ ಎಂಬ ಭಾವನೆ ಇತ್ತು. ಅವರು ಯಾವತ್ತು ರಾಜ್ಯಸಭೆ ಸ್ಥಾನ ಬೇಕು ಅಂತ ಹೇಳಿಲ್ಲ. ಅವರು ಅರ್ಜಿ ಹಾಕಿರಲಿಲ್ಲ .
ಸುರೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ







