
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ನಲ್ಲಿ ಒತ್ತಡಗಳು ಹೆಚ್ಚಾಗಿರುವಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲಿ ದೆಹಲಿಗೆ ತೆರಳಿ, ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ವಿದೇಶ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಇಂದು ಬೆಳಗ್ಗೆ ವಿದೇಶದಿಂದ ವಾಪಸ್ಸಾಗಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ, ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡುವರು ಎಂಬ ವಿಚಾರ ತಿಳಿದು ಬಂದಿದೆ.
ಮುಖ್ಯಮAತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸಹ ದೆಹಲಿಗೆ ತೆರಳಲಿದ್ದು, ಎಲ್ಲರೂ ವರಿಷ್ಠರ ಜತೆ ಕುಳಿತು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವರು.
ಮುಖ್ಯಮAತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಒಂದು ಸುತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರುಗಳ ಜತೆ ಚರ್ಚೆ ನಡೆಸಿ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಸಚಿವರ ಪಟ್ಟಿಯೂ ಅಂತಿಮವಾಗಿದ್ದು, ರಾಹುಲ್‌ಗಾಂಧಿ ಅವರ ಅಂಕಿತ ದೊರೆತ ತಕ್ಷಣವೇ ಸಂಪುಟ ವಿಸ್ತರಣೆಯಾಗಲಿದೆ.
ಈ ತಿಂಗಳ 15 ರಿಂದ ಆಷಾಢಮಾಸ ಆರಂಭವಾಗಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಿಸುವ ಇರಾದೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಂದಿದ್ದು, ಒಂದು ವೇಳೆ 15 ರೊಳಗೆ ಸಚಿವರ ಪಟ್ಟಿಗೆ ವರಿಷ್ಠರ ಅಂಕಿತ ಸಿಗದಿದ್ದರೆ ಆಷಾಢ ಮಾಸ ಎಂಬುದನ್ನು ನೋಡದೆ ಈ ವಾರದ ಅಂತ್ಯದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಸಂಪುಟ ವಿಸ್ತರಣೆಯಾದರೂ ಅಚ್ಚರಿ ಇಲ್ಲ. ಆಷಾಢಮಾಸ ಇವನ್ನೆಲ್ಲಾ ಕಾಂಗ್ರೆಸ್ ವರಿಷ್ಠರು ಹೆಚ್ಚು ನಂಬದ ಕಾರಣ ಆಷಾಡ ಯಾವುದನ್ನು ಲೆಕ್ಕಿಸದೆ ಸಂಪುಟ ವಿಸ್ತರಣೆ ಅವರು ಹಸಿರು ನಿಶಾನೆ ತೋರಲಿದ್ದಾರೆ ಎಂದು ಹೇಳಲಾಗಿದೆ.
ಜೂನ್. 3 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ 13 ಸಚಿವರು ಸಂಪುಟ ಸೇರಿದ್ದಾರೆ. ಇನ್ನೂ 20 ಸ್ಥಾನಗಳು ಖಾಲಿ ಉಳಿದಿವೆ. ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, 2 ಸ್ಥಾನಗಳನ್ನು ಖಾಲಿ ಇಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿವೆ.








